ಪುತ್ತೂರು: ಕೆಲ ವರ್ಷಗಳ ಹಿಂದೆ ನಡೆದ ಹಿಂದೂ ಜಾಗರಣ ವೇದಿಕೆ ಮುಖಂಡ ಕಾರ್ತಿಕ್ ಮೇರ್ಲ ರವರ ಹತ್ಯೆಯ ಆರೋಪಿ ಚರಣ್ ರಾಜ್ ರೈ ರನ್ನು ಜೂ.4 ರಂದು ಹತ್ಯೆ ಮಾಡಲಾಗಿದ್ದು, ಈ ಹಿನ್ನೆಲೆ ವ್ಯಕ್ತಿಯೋರ್ವರು ನೀಡಿದ ದೂರಿನಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಚರಣ್ ರಾಜ್ ಸ್ನೇಹಿತ ನವೀನ್ ಕುಮಾರ್ ನೀಡಿದ ದೂರಿನ ಮೇರೆಗೆ ಕಲ್ಲಡ್ಕ ಮೂಲದ ಕಿಶೋರ್ ಪೂಜಾರಿ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಚರಣ್ ರಾಜ್ ರವರ ಪತ್ನಿಯ ತಂದೆ ಕಿಟ್ಟಣ್ಣ ರೈ ಎಂಬವರು ಪೆರ್ಲಂಪಾಡಿ ಎಂಬಲ್ಲಿ ಮೆಡಿಕಲ್ ಶಾಪ್ ಪ್ರಾರಂಭಿಸುವರಿದ್ದು, ಈ ಹಿನ್ನೆಲೆ ಪೂರ್ವ ತಯಾರಿ ಕೆಲಸಕ್ಕೆ ಸಹಾಯ ಮಾಡಲು ಹೋಗಿ ಬರುತ್ತಿದ್ದು, ಈ ಹಿನ್ನೆಲೆ ಜೂ.4 ರಂದು ಚರಣ್ ರಾಜ್ ಮತ್ತು ನವೀನ್ ಕುಮಾರ್ ಕಾರಿನಲ್ಲಿ ಪೆರ್ಲಂಪಾಡಿಗೆ ತೆರಳಿ, ಮೆಡಿಕಲ್ ಶಾಪ್ ಬಳಿ ಕೆಲಸದಲ್ಲಿ ತೊಡಗಿದ್ದ ವೇಳೆ ಚರಣ್ ರಾಜ್ ಹೊರಗಡೆ ಬಂದು ಕಾರಿನ ಬಳಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದಾಗ ಯಾರೋ ಹಲ್ಲೆ ಮಾಡಿದ್ದು, ಚರಣ್ ಬೊಬ್ಬೆ ಹೊಡೆಯುದ್ದನ್ನು ಕೇಳಿ ನವೀನ್ ಕುಮಾರ್ ಹೊರಗೆ ಬಂದಾಗ ಕಲ್ಲಡ್ಕ ಕಿಶೋರ್ ಪೂಜಾರಿ ಮತ್ತು ಮೂವರು ಹಲ್ಲೆ ನಡೆಸುತ್ತಿದ್ದು, ನವೀನ್ ಕುಮಾರ್ ತಡೆಯಲು ಹೋದಾಗ ಆತನನ್ನು ಬೆದರಿಸಿ ನಂತರ ಬೈಕ್ ನಲ್ಲಿ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ. 49/2022 ಕಾನೂನಿನ ಕಲಂ :302 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.