ಪುತ್ತೂರು: ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೇಳೆ ಯಕ್ಷಗಾನ ವೀಕ್ಷಿಸುತ್ತಿದ್ದಾಗ ಪೆಂಡಾಲ್ ಒಳಗಡೆ ನಡೆದಿದ್ದ ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಕಾರ್ಯದರ್ಶಿ, ಸಂಪ್ಯ ಮೇರ್ಲ ನಿವಾಸಿ ಕಾರ್ತಿಕ್ ಸುವರ್ಣ(27)ರವರ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಸಂಪ್ಯ ನಿವಾಸಿ ಚರಣ್ರಾಜ್ ರೈ ರನ್ನು ಪೆರ್ಲಂಪಾಡಿಯ ರಸ್ತೆ ಬದಿಯಲ್ಲಿ ಜೂ.4 ರಂದು ಸಂಜೆ ಹತ್ಯೆಗೈದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ಕಿಶೋರ್ ಕುಮಾರ್ ಕಲ್ಲಡ್ಕರವರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಿಶೋರ್ ಪೂಜಾರಿ ಜೊತೆ ಈಶ್ವರಮಂಗಲದ ರಾಕೇಶ್ ಪಂಚೋಡಿ ಮತ್ತು ಬಲ್ನಾಡಿನ ರೇಮಂತ್ ಎಂಬವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಕಿಶೋರ್ ಕುಮಾರ್ ಕಲ್ಲಡ್ಕರವರು ತನ್ನ ಆಪ್ತ ಒಡನಾಡಿ, ಸಂಬಂಧಿಕನೂ ಆಗಿದ್ದ ಮೇರ್ಲ ಕುಟುಂಬದ ಕಾರ್ತಿಕ್ ಸುವರ್ಣರ ಕೊಲೆಗೆ ಪ್ರತಿಯಾಗಿ ದ್ವೇಷದಿಂದ ಚರಣ್ರಾಜ್ ರೈಯವರನ್ನು ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಹುತೇಕ ಖಚಿತವಾಗಿದೆ.
ಚರಣ್ ರಾಜ್ ರೈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಕೆಯ್ಯೂರು ನೂಜಿ ಮುತ್ತಪ್ಪ ರೈಯವರ ಪುತ್ರ ನರ್ಮೇಶ್ ರೈ, ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಯತೀಶ ಎಂಬವರ ಪುತ್ರ ನಿತಿಲ್ ಶೆಟ್ಟಿ ಹಾಗೂ ಕಡಬ ತಾಲೂಕಿನ ಬೆಳಂದೂರು ಮರಕಲ ನಿವಾಸಿ ರಾಮ ಎಂಬವರ ಪುತ್ರ ವಿಜೇಶ್ ಎಂಬವರನ್ನು ಪೊಲೀಸರು ಕೆಯ್ಯೂರು ಗ್ರಾಮದ ಪಲ್ಲತ್ತಡ್ಕದಲ್ಲಿರುವ ಗೇರುಬೀಜದ ಕಾಡಿನಲ್ಲಿ ವಶಕ್ಕೆ ಪಡೆದುಕೊಂಡಿದ್ದರು.
ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಕಿಶೋರ್ ಪೂಜಾರಿ ಕಲ್ಲಡ್ಕ, ರಾಕೇಶ್ ಪಂಚೋಡಿ ಮತ್ತು ರೇಮಂತ್ ಬಲ್ನಾಡು ರವರು ಪೊಲೀಸ್ ವಶವಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವನೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ಚಂದ್ರ ಮತ್ತು ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ಅವರ ನೇತೃತ್ವದಲ್ಲಿ ಸುಳ್ಯ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ನವೀನ್ಚಂದ್ರ ಜೋಗಿ, ಬೆಳ್ಳಾರೆ ಪೊಲೀಸ್ ಠಾಣೆಯ ಎಸ್.ಐ ರುಕ್ಮ ನಾಯ್ಕ್, ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಉದಯರವಿ ಅವರ ತಂಡ ರಚಿಸಲಾಗಿತ್ತು. ವಿಶೇಷ ತನಿಖಾ ತಂಡ ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.

























