ಮಂಗಳೂರು: ಯುನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿಪಕ್ಷ ಉಪನಾಯಕ ಯು ಟಿ ಖಾದರ್ ಅವರು ಹಿಜಾಬ್ಗಾಗಿ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರಿಗೆ ಸ್ಪಷ್ಟ ಸಲಹೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಯು.ಟಿ ಖಾದರ್, ಹಿಜಾಬ್ಗಾಗಿ ಹಠ ಹಿಡಿದವರು, ಕಾನೂನಿನ ವಿರುದ್ಧ ಮಾತನಾಡುವವರು ಒಮ್ಮೆ ತಿಳಿದುಕೊಳ್ಳಬೇಕು. ಹಿಜಾಬ್ ಬಗ್ಗೆ ಪಟ್ಟು ಹಿಡಿದ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ. ಪಾಕಿಸ್ತಾನ, ಸೌದಿಯಂತಹ ದೇಶಗಳಿಗೆ ಹೋಗಲಿ. ಆಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತದೆ.ಇಲ್ಲಿ ಬೇಕಾದ ಹಾಗೆ ಮಾತನಾಡೋದು, ಜಿಲ್ಲಾಧಿಕಾರಿಯನ್ನು ಭೇಟಿಯಾಗೋದು, ಸುದ್ದಿಗೋಷ್ಠಿ ಎಲ್ಲಾ ಮಾಡಬಹುದು. ಆದರೆ ಅದನ್ನೇ ವಿದೇಶಕ್ಕೆ ಹೋಗಿ ಮಾತನಾಡಲಿ, ಇಲ್ಲಿ ಹುಲಿಯ ಹಾಗೆ ಇದ್ದವರು ಅಲ್ಲಿ ಬೆಕ್ಕಿನ ತರಹ ಆಗುತ್ತಾರೆ. ನಮ್ಮ ದೇಶದ ಕಾನೂನು ನೀಡಿದ ಅವಕಾಶದ ಮಹತ್ವ ಗೊತ್ತಾಗುತ್ತದೆ.
ಇಲ್ಲಿ ಸಿಗುವ ಸ್ವಾತಂತ್ರ್ಯದ ಅರಿವು ಆಗುತ್ತದೆ. ಶಿಕ್ಷಣದ ಎದುರು ಆ ಧರ್ಮ, ಈ ಧರ್ಮ ಆ ಸಮುದಾಯ ಅನ್ನೋದು ಇರುವುದಿಲ್ಲ. ಶಿಕ್ಷಣದ ಮೂಲಕ ಭವಿಷ್ಯ , ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಮಕ್ಕಳು ದಾರಿ ತಪ್ಪದಂತೆ ಹೆತ್ತವರು ಜಾಗ್ರತೆ ವಹಿಸಬೇಕು ಎಂದು ತಿಳಿಸಿದ್ದಾರೆ.

























