ಮಂಗಳೂರು: ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ಗಂಭೀರ ಹಲ್ಲೆಗೊಳಗಾಗಿದ್ದ ರೌಡಿಶೀಟರ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳಿದಿದ್ದಾನೆ ಎಂದು ತಿಳಿದು ಬಂದಿದೆ.
ರಾಜು ಯಾನೆ ರವಿರಾಜ್ ಬಂಗೇರ ಅಲಿಯಾಸ್ ರಾಘವೇಂದ್ರ ಕೊಲೆಯಾದ ರೌಡಿಶಿಟರ್.

ನಿನ್ನೆ ರವಿರಾಜ್ ಪತ್ನಿಯ ಹುಟ್ಟು ಹಬ್ಬ ಇದ್ದ ಕಾರಣ ನಿನ್ನೆ ಸಂಜೆ ಮನೆಯಲ್ಲಿಯೇ ಬರ್ಡೆ ಸೆಲೆಬ್ರೇಶನ್ ಇತ್ತು. ಪತ್ನಿಯ ಬರ್ತ್ಡೇ ಕೇಕ್ ಕಟ್ಟಿಂಗ್ ಬಳಿಕ 7 ಗಂಟೆಯ ಸುಮಾರಿಗೆ ಈತ ಮನೆಯಿಂದ ಕೆಲವೇ ಮೀಟರ್ ದೂರದ ಬೇಕರಿಗೆ ಬರುತ್ತಿದ್ದಂತೆ ಬೈಕಿನಲ್ಲಿ ಬಂದಿದ್ದ ಇಬ್ಬರು ಅಟ್ಟಾಡಿಸಿ ತಲವಾರಿನಲ್ಲಿ ಕಡಿದಿದ್ದಾರೆ.
ಕುತ್ತಿಗೆ, ಭುಜ, ಮುಖಕ್ಕೆ ಗಂಭೀರ ಗಾಯಗೊಂಡು ರಕ್ತದೋಕುಳಿಯಲ್ಲಿ ನೆಲಕ್ಕೆ ಬಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ, ಯಾರೊಬ್ಬರೂ ಹೆದರಿ ಸಹಾಯಕ್ಕೆ ಬಂದಿರಲಿಲ್ಲ. ಸುಮಾರು ಹೊತ್ತಿನ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆ ವೇಳೆಗಾಗಲೇ ತೀವ್ರ ರಕ್ತಸ್ರಾವದಿಂದ ಬಳಲಿದ್ದ ರಾಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ರವಿರಾಜನ ಹಳೆಯ ಗೆಳೆಯರಾದ ನವೀನ್, ಸಂದೀಪ್ ಮತ್ತಿತರರು ಹಳೇ ವೈಷ್ಯಮ್ಯದಲ್ಲಿ ಈ ಕೃತ್ಯ ನಡೆಸಿದ್ದಾರೆ ಎಂಬ ಶಂಕೆ ಇದೆ.ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು 2019ರಲ್ಲಿ ಸಂದೇಶ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಸುರತ್ಕಲ್ ಪೇಟೆಯ ಜೀವನ್ ತಾರಾ ವೈನ್ ಶಾಪ್ ಬಳಿ ಕುಳಿತಿದ್ದಾಗ ಎರಡು ತಂಡಗಳ ನಡುವೆ ಜಗಳ ನಡೆದಿದ್ದು, ಜೊತೆಗಿದ್ದ ಹಳೆಯ ಗೆಳೆಯರೇ ಸಂದೇಶನ್ನು ಕೊಲೆ ಮಾಡಿದ್ದರು.
ಅದೇ ರಾತ್ರಿ ಕೊಲೆ ನಡೆದಿದ್ದ ಜಾಗದಲ್ಲಿದ್ದ ರವಿರಾಜ್, ಗಣೇಶ್ ಮತ್ತು ಸೊಹೈಲ್ ಎಂಬ ಮೂವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದರು. ಜೊತೆಗೆ ಈ ಹಿಂದೆ ಈತನ ಮೇಲೆ ಎರಡು ಕೊಲೆ ಪ್ರಕರಣ ಹಾಗೂ ಕೊಲೆಗೆ ಯತ್ನ ಪ್ರಕರಣ ದಾಖಲಾಗಿತ್ತು.
ರವಿರಾಜ್ ಬಂಗೇರ ಮೂರು ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























