ಉಪ್ಪಿನಂಗಡಿ: ಹಿಜಾಬ್ ವಿಚಾರವಾಗಿ ಸರ್ಕಾರಿ ನಿಯಮಾವಳಿಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ 24 ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರೂ ಅಮಾನತು ಆಗಿರುವ ವಿದ್ಯಾರ್ಥಿನಿಯರ ಪೈಕಿ ಹಲವರು ಮಂಗಳವಾರ ಕಾಲೇಜಿಗೆ ಬಂದು ತರಗತಿಗೆ ಪ್ರವೇಶಿಸಲು ಯತ್ನಿಸಿದರಾದರೂ ಅವಕಾಶ ನಿರಾಕರಿಸಲ್ಪಟ್ಟು ವಿಶ್ರಾಂತಿ ಕೊಠಡಿಯಲ್ಲೇ ದಿನ ಕಳೆದಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪು, ಸರ್ಕಾರದ ಆದೇಶ, ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ಣಯದ ಹೊರತಾಗಿಯೂ ಸತತವಾಗಿ ನಿಯಮ ಉಲ್ಲಂಘಿಸಿ ಹಿಜಾಬ್ ಧರಿಸಿಯೇ ಕಾಲೇಜು ಪ್ರವೇಶಿಸಲು ಉದ್ದೇಶಿಸಿದ್ದ 24 ಮಂದಿ ವಿದ್ಯಾರ್ಥಿನಿಯರನ್ನು ಕಳೆದ ಸೋಮವಾರ ಒಂದು ವಾರದ ಕಾಲ ಅಮಾನತುಗೊಳಿಸಲಾಗಿತ್ತು. ಇದಕ್ಕೂ ಮುನ್ನ ಕಾರಣಕ್ಕಾಗಿ 7 ಮಂದಿ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿತ್ತು.
ಸೋಮವಾರ ಅಮಾನತುಗೊಳಿಸಲ್ಪಟ್ಟ ವಿದ್ಯಾರ್ಥಿನಿಯರ ಪೈಕಿ ಹಲವರು ತಮಗೆ ಅಮಾನತು ಆದೇಶದ ಬಗ್ಗೆ ತಿಳಿದಿರಲಿಲ್ಲ ಎಂಬ ವಾದ ಮಂಡಿಸಿ ಮಂಗಳವಾರ ಕಾಲೇಜಿಗೆ ಬಂದಿದ್ದು, ಅವರಿಗೆ ತರಗತಿ ಪ್ರವೇಶಿಸಲು ಅವಕಾಶ ನಿರಾಕರಿಸಲಾಯಿತು ಎಂದು ತಿಳಿದು ಬಂದಿದೆ.