ನವದೆಹಲಿ: ಮಾತು ಮನೆ ಕೆಡಿಸ್ತು.. ತೂತು ಒಲೆ ಕೆಡಿಸ್ತು ಅನ್ನೋ ಮಾತೊಂದಿದೆ. ಅದರಂತೆ ಬಿಜೆಪಿ ನಾಯಕರಿಬ್ಬರ ಹೇಳಿಕೆ ಇಡೀ ದೇಶದ ನಡೆ ಪ್ರಶ್ನಿಸುವಂತೆ ಮಾಡಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಎದ್ದಿರೋ ಬಿರುಗಾಳಿ ಕೇಂದ್ರ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿದೆ. ಇದೀಗ ಕೆಟ್ಟ ಮೇಲೆ ಎಚ್ಚೆತ್ತುಕೊಂಡಿರೋ ಕಮಲಪಡೆ ಕೂಗುಮಾರಿಗಳಿಗೆ ಕಡಿವಾಣ ಹಾಕೋದಕ್ಕೆ ಮುಂದಾಗಿದೆ. ಮಾತಿಗೂ ಮಾರ್ಗಸೂಚಿ ಹೊರಡಿಸಿದೆ.
ದೇಶದೊಳಗೆ ಎದ್ದಿದ್ದ ಧರ್ಮ ಸಂಘರ್ಷ ಎಲ್ಲೆ ಮೀರಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ, ವಿರೋಧದ ವರ್ಷಧಾರೆಗೆ ಕಾರಣವಾಗಿದೆ. ಹಂತ ಹಂತವಾಗಿ ವ್ಯಾಪಿಸಿದ ಧರ್ಮದ ದಂಗಲ್ನಲ್ಲಿ ರಾಜಕೀಯವೂ ಮಿಂಗಲ್ ಆಗಿದ್ದು, ನಾಯಕರ ಲೌಡ್ಸ್ಪೀಕರ್ ಆನ್ ಮಾಡುವಂತೆ ಮಾಡಿತ್ತು. ಬಳಿಕ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು ಅಂತಹದ್ದೇ ಒಂದು ಚರ್ಚೆಯಲ್ಲಿ ಬಿಜೆಪಿಯ ಇಬ್ಬರು ನಾಯಕರು, ಮಾತಿನ ಲಕ್ಷ್ಮಣ ರೇಖೆ ದಾಟಿಬಿಟ್ಟಿದ್ರು. ಇದು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಸರದ ಅಲೆ ಮೂಡಲು ಕಾರಣವಾಗಿದೆ.
15ಕ್ಕೂ ಹೆಚ್ಚು ರಾಷ್ಟ್ರಗಳು ಖಂಡನೆ ವ್ಯಕ್ತಪಡಿಸಿವೆ. ತಕ್ಷಣ ಮಾತಿನ ಮಿಸ್ಫೈರ್ ಮಾಡಿದ್ದವರಿಗೆ ಕಮಲಪಡೆ ಪಕ್ಷದಿಂದಲೇ ಗೇಟ್ ಪಾಸ್ ನೀಡಿದೆ. ಆದ್ರೆ, ಇದು ಇಬ್ಬರ ವಿಚಾರವಲ್ಲ.. ಹೀಗೆ ಬಾಯಿಗೆ ಬಂದಂತೆ ಮಾತನಾಡೋರ ಸಂಖ್ಯೆ ಸಾಕಷ್ಟಿದೆ. ಅಂಥವರಿಗೆ ಕಡಿವಾಣ ಹಾಕೋದಕ್ಕೆ ಬಿಜೆಪಿ ಬಿಗ್ ಪ್ಲಾನ್ ಮಾಡಿದೆ. ಅದರ ಭಾಗವಾಗಿ ಮಾತಿಗೂ ಮಾರ್ಗಸೂಚಿ ಹೊರಡಿಸಿದೆ.
ಪಕ್ಷದ ಭಾಗವಾಗಿ ಯಾರು ಮಾತನಾಡಬೇಕು.. ಏನೆಲ್ಲಾ ಮಾತನಾಡಬೇಕು. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಅನ್ನೋ ಸಂಬಂಧ ಪಕ್ಷದ ನಾಯಕರಿಗೆ ಬಿಜೆಪಿ ಮಾರ್ಗಸೂಚಿಯೊಂದನ್ನ ಜಾರಿ ಮಾಡಿದೆ.
ಮಾತಿಗೂ ಮಾರ್ಗಸೂಚಿ..
- ಯಾವುದೇ ಮಾಧ್ಯಮಗಳ ಕಾರ್ಯಕ್ರಮದಲ್ಲಿ ಎಲ್ಲಾ ನಾಯಕರು ಭಾಗಿಯಾಗೋದಕ್ಕೆ ನಿಯಂತ್ರಣ ಹೇರಲಾಗಿದೆ.
- ಕೆಲವೇ ಕೆಲವು ಪಕ್ಷದ ವಕ್ತಾರರಿಗೆ ಮಾತ್ರ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದಕ್ಕೆ ಬಿಜೆಪಿ ಮಾಧ್ಯಮ ಘಟಕದಿಂದ ಸೂಚನೆ ಹೊರಡಿಸಲಾಗಿದೆ.
- ಕಾರ್ಯಕ್ರಮಗಳಲ್ಲಿ, ಚರ್ಚೆಗಳಲ್ಲಿ ಭಾಗಿಯಾಗುವ ನಾಯಕರು, ಅದಕ್ಕೂ ಮೊದಲು ಅಗತ್ಯ ಸಿದ್ಧತೆಗಳನ್ನ ಮಾಡಿಕೊಳ್ಳಬೇಕು.
- ಯಾವ ರೀತಿ ಉತ್ತರ ನೀಡಬೇಕೆಂದು ತಯಾರಿ ಮಾಡಿ, ಮುಂದಡಿ ಇಡಬೇಕು ಅಂತಾ ಸೂಚಿಸಲಾಗಿದೆ.
- ಚರ್ಚೆಯ ವಿಷಯದ ಬಗ್ಗೆ ಪಕ್ಷದ ಅಭಿಪ್ರಾಯ ಏನು ಅನ್ನೋದನ್ನ ಸ್ಪಷ್ಟವಾಗಿ ಹೇಳಬೇಕು ಅಂತಲೂ ಸೂಚನೆ ನೀಡಲಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ.
- ಇನ್ನು, ಚರ್ಚೆಗಳಲ್ಲಿ ಏನು ಮಾಡಬಾರದು ಅನ್ನೋದಕ್ಕೂ ಒಂದಷ್ಟು ಸೂಚನೆಯ ಸಂದೇಶವನ್ನು ಪಕ್ಷದ ನಾಯಕರಿಗೆ ರವಾನಿಸಲಾಗಿದೆ.
- ಚರ್ಚೆಗಳಲ್ಲಿ ಭಾಗಿಯಾದಾಗ ನಿಯಂತ್ರಿತ ಭಾಷೆಗಳನ್ನ ಬಳಸಬೇಕು.
- ಎಂಥಹುದೇ ಸಮಯ ಬಂದರೂ, ತಳಮಳವಾಗಬಾರದು, ಉದ್ವೇಗಕ್ಕೂ ಒಳಗಾಗಿ ಮಾತನಾಡಬಾರದು.
- ಪಕ್ಷದ ಸಿದ್ಧಾಂತ ಮತ್ತು ತತ್ವಗಳಿಗೆ ಅನುಗುಣವಾಗಿ ಮಾತನಾಡಬೇಕು ಅಂತಾ ಸೂಚನೆ ನೀಡಲಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ.
- ಧಾರ್ಮಿಕ ವಿಚಾರಗಳ ಬಗ್ಗೆ ಧಾರ್ಮಿಕ ಚಿಹ್ನೆಗಳ ಬಗ್ಗೆ ಮಾತುಗಳನ್ನಾಡಬಾರದು.
- ಯಾವುದೇ ಕಾರಣಕ್ಕೂ ಪಕ್ಷದ ಅಜೆಂಡಾಗಳನ್ನು ಹೊರತುಪಡಿಸಿ ಬೇರೇನೂ ಮಾತನಾಡಬಾರದು.
- ಯಾರದ್ದೋ ಮಾತಿನ ಸುಳಿಯಲ್ಲಿ ಸಿಲುಕಿಕೊಳ್ಳಬೇಡಿ. ಯಾರದ್ದೋ ಮಾತಿನ ಸುಳಿಗೆ ಸಿಲುಕಿ ನಿಮ್ಮ ನಿಲುವು ಬದಲಾಗದಂತೆ ಕಾಪಾಡಿಕೊಳ್ಳಬೇಕು ಅಂತಾ ಬಿಜೆಪಿ ಮಾಧ್ಯಮ ಘಟಕ ಸೂಚನೆ ನೀಡಿರೋದಾಗಿ ಮೂಲಗಳು ಮಾಹಿತಿ ನೀಡಿವೆ.
ಜೂ.6- ಜು.9ರ ವರೆಗೆ ಒಂದು ತಿಂಗಳು ಪುತ್ತೂರಿನಲ್ಲಿ ಶಾಪಿಂಗ್ ಫೆಸ್ಟಿವಲ್..


























