ಪುತ್ತೂರು: ಸವಣೂರಿನ ಶಿಲ್ಪಿ, ಸಹಕಾರಿ ರತ್ನ, ಕೆ.ಸೀತಾರಾಮ ರೈ ಸವಣೂರು ರವರ 75ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಅಮೃತರಶ್ಮಿಯ ಪ್ರಯುಕ್ತ ಜೂ.9 ರಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದ ವಿದ್ಯಾಗಂಗೋತ್ರಿಯಲ್ಲಿ ಸಮಸ್ತ ನಾಗರಿಕರ ಪರವಾಗಿ ಅಮೃತ ಸಮ್ಮಾನ ಕಾರ್ಯಕ್ರಮ ನಡೆಯಿತು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸಮ್ಮಾನ ನೆರವೇರಿಸಿ ಮಾತನಾಡಿ, ಸ್ವತಂತ್ರವಾಗಿ ಯೋಚಿಸಿ ಅದನ್ನು ಕಾರ್ಯರೂಪಕ್ಕೆ ತಂದು ಸಮಾಜಕ್ಕೆ ನೀಡಿದವರು ರೈಗಳು. ಸವಾಲುಗಳನ್ನು ಮೆಟ್ಟಿ ನಿಂತು ಮುನ್ನುಗಿದ್ದರೆ ಆದರ್ಶ ವ್ಯಕ್ತಿಯಾಗಿ ಹೇಗೆ ರೂಪುಗೊಳ್ಳಬಹುದು ಅನ್ನುವುದಕ್ಕೆ ಸೀತಾರಾಮ ರೈ ಅವರು ಉದಾಹರಣೆ ಎಂದು ಶ್ಲಾಘಿಸಿದರು.

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ತ್ಯಾಗದ ಬದುಕಿನೊಂದಿಗೆ ಬೆಳೆದು ನಿಂತು ಸಮಾಜಕ್ಕೆ ಸ್ಪೂರ್ತಿಯಾದವರು. ವ್ಯಕ್ತಿಗೆ ಸಂಸ್ಕಾರ ಸಿಕ್ಕರೆ ಹೇಗೆ ಬೆಳೆಯಬಹುದು ಅನ್ನುವುದಕ್ಕೆ ಅವರೊಬ್ಬ ನಿದರ್ಶನ ಎಂದರು.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮ ಮಾರ್ಗದದಲ್ಲಿ ಬದುಕಿ ಸಮಾಜವನ್ನು ಅರಿತುಕೊಂಡು ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡ ರೈ ಅವರ ಸೇವಾ ಬದುಕಿನ ಸ್ಮರಣೆ ಉತ್ತಮ ಕಾರ್ಯ ಎಂದರು.

ಸುಳ್ಯದ ಎಂ.ಬಿ. ಫೌಂಡೇಶನ್, ವಿಶೇಷ ಚೇತನರ ಶಾಲೆಯ ಸಂಸ್ಥಾಪಕ ಎಂ.ಬಿ.ಸದಾಶಿವ ಅಭಿನಂದನಾ ಭಾಷಣ ಮಾಡಿ, ಸಹಕಾರ, ಶಿಕ್ಷಣ, ಕೃಷಿ, ಧಾರ್ಮಿಕ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ಅವರು ಕೊಡುಗೆ ನೀಡಿ ಸವಣೂರು ಎಂಬ ಪುಟ್ಟ ಊರಿಗೆ ಸ್ವರ್ಣದ ಕಳೆ ತಂದವರು ಎಂದರು.

ಅಮೃತ ಸಮ್ಮಾನದ ಗೌರವ ಸ್ವೀಕರಿಸಿ ಮಾತನಾಡಿದ ಸವಣೂರು ಸೀತಾರಾಮ ರೈ, ಇಂದಿನ ಈ ಸ್ಮರಣೀಯ ಗೌರವಕ್ಕೆ ಆಭಾರಿಯಾಗಿದ್ದು ಮುಂದೆಯು ಸಮಾಜಕೋಸ್ಕರ ಸೇವೆ ನೀಡುತ್ತೇನೆ ಎಂದರು.

ಸವಣೂರಿನ ನಾಗರಿಕರಿಗಾಗಿ ಸೀತಾರಾಮ ರೈ ಅವರು ನಿರ್ಮಿಸಿಕೊಟ್ಟಿರುವ ಸುಸಜ್ಜಿತ ಶೌಚಾಲಯ ಮತ್ತು ಸ್ನಾನಗೃಹದ ಲೋಕಾರ್ಪಣೆಗೊಳಿಸಲಾಯಿತು. ಸಾರ್ವಜನಿಕರು, ಸಂಘ ಸಂಸ್ಥೆಗಳ ವತಿಯಿಂದ ಸೀತಾರಾಮ ರೈ ಅವರನ್ನು ಗೌರವಿಸಲಾಯಿತು. ಸಾಕ್ಷಚಿತ್ರ, ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. ಲಕ್ಷ್ಮಿ ಮೆಮೋರಿಯಲ್ ಟ್ರಸ್ಟ್ ನ ಸಂಸ್ಥಾಪಕ ಡಾ. ಎ.ಜೆ. ಶೆಟ್ಟಿ ಉದ್ಘಾಟಿಸಿದರು. ವೇದಿಕೆಯಲ್ಲಿ ಕಸ್ತೂರಿ ಕಲಾ ರೈ, ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ, ಕಾರ್ಯಾಧ್ಯಕ್ಷ ಎನ್. ಸುಂದರ ರೈ, ಜತೆ ಕಾರ್ಯದರ್ಶಿ ಕುಸುಮಾ ಪಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಶ್ಲೋಕ ಪಠಣ, ಅಮೃತ ವಚನ ನಡೆಯಿತು. ಅಮೃತ ರಶ್ಮಿ ಸ್ವಾಗತ ಸಮಿತಿ ಅಧ್ಯಕ್ಷ ಕೆ. ಆರ್. ಗಂಗಾಧರ್ ಸ್ವಾಗತಿಸಿ, ಕೋಶಾಽಕಾರಿ ಅಶ್ವಿನ್ ಎಲ್. ಶೆಟ್ಟಿ ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ನಿರೂಪಿಸಿದರು. ಕಾರ್ಯದರ್ಶಿ ಸೀತಾರಾಮ ಕೇವಳ ಸಮ್ಮಾನ ಪತ್ರ ವಾಚಿಸಿದರು. ಪಿ.ಬಿ. ಹರೀಶ್ ರೈ ಅಭಿನಂದನಾ ಗ್ರಂಥದ ಬಗ್ಗೆ ಮಾತನಾಡಿದರು.































