ನವದೆಹಲಿ: ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆಯಿಂದ ಇಡೀ ಭಾರತ ಹೊತ್ತಿ ಉರಿಯುತ್ತಿದೆ. ಒಂದು ಕಡೆ ಬೆಂಕಿ ಹೊತ್ತಿಸಿದವರ ಬಂಧನವೂ ಆಗ್ತಿದೆ. ಯುಪಿಯಲ್ಲಿ ಮತ್ತೆ ಬುಲ್ಡೋಜರ್ ಫಿಲ್ಡಿಗಿಳಿದಿದೆ. ಈ ಮಧ್ಯೆ ಪೈಗಂಬರ್ ವಿರುದ್ಧ ಹೇಳಿಕೆ ನೀಡಿದ್ದ ನೂಪುರ್ ಶರ್ಮಾರಿಗೆ ಹಿಂದೂ ಧರ್ಮದರ್ಶಿಗಳು ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ.
ಪೈಗಂಬರ್ ವಿರುದ್ಧದ ಹೇಳಿಕೆಯಿಂದ ದೇಶದಲ್ಲಿ ಕಿಡಿ ಹೊತ್ತಿಕೊಂಡಿದೆ. ಹೊತ್ತಿಕೊಂಡ ಕಿಡಿ ಇಡೀ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದೆ. ಉತ್ತರ ಪ್ರದೇಶ, ದೆಹಲಿ, ವೆಸ್ಟ್ ಬೆಂಗಲ್ ಸೇರಿದಂತೆ ಹಲವು ರಾಜ್ಯಗಳು ಧಗಧಗಿಸಿವೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಬೆಂಕಿ ನಂದಿಸುವ ಕೆಲಸವಾಗ್ತಿದೆ. ಪೊಲೀಸರು ಬೆಂಕಿ ಹಚ್ಚಿದ ಒಬ್ಬೊಬೊಬ್ಬರನ್ನೂ ಹುಡುಕಿ ಹುಡುಕಿ ಭೇಟೆಯಾಡ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ಗಳು ಘರ್ಜಿಸಿವೆ.

ನಿಜ.. ಶುಕ್ರವಾರದ ನಮಾಜ್ ಬಳಿಕ ಉತ್ತರ ಪ್ರದೇಶ ಹೊತ್ತಿ ಉರಿದಿತ್ತು. ಪ್ರತಿಭಟನಾಕಾರರ ಕಿಚ್ಚಿನಿಂದ ಉತ್ತರದ ನಾಡು ಧಗಧಗಿಸಿತ್ತು. ಸದ್ಯ ಯುಪಿಯಲ್ಲಿ ಕಿಡಿ ಹೊತ್ತಿಸಿದ ದುರುಳರನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಒಂಭತ್ತು ಜಿಲ್ಲೆಯ ಒಟ್ಟು 255 ಪ್ರತಿಭಟನಾಕಾರರನ್ನ ಬಂಧಿಸಿದ್ದಾರೆ.

ಪ್ರಯಾಗ್ರಾಜ್ನಲ್ಲಿ 68 ಪ್ರತಿಭಟನಾಕಾರರ ಬಂಧನವಾಗಿದ್ರೆ, ಸಹರಾನ್ಪುರ್ನಲ್ಲಿ 64 ಮಂದಿ ಅರೆಸ್ಟ್ ಆಗಿದ್ದಾರೆ. ಹತ್ರಾಸ್ನಲ್ಲಿ 50 ಮಂದಿ, ಅಂಬೇಡ್ಕರ್ ನಗರ್ನಲ್ಲಿ 28 ಮಂದಿ, ಮೊರೊದಾಬಾದ್ನಲ್ಲಿ 27 ಮಂದಿ ಪ್ರತಿಭಟನಾಕಾರರು ಅರೆಸ್ಟ್ ಆಗಿದ್ದಾರೆ. ಇನ್ನು ಫಿರೋಜಾಬಾದ್ನಲ್ಲಿ 13 ಮಂದಿ ಪ್ರತಿಭಾಟನಾಕಾರರನ್ನ ಪೊಲೀಸರು ಬಂಧಿಸಿದ್ದಾರೆ.
ಗಲಭೆಕೋರರನ್ನ ಕೇವಲ ಬಂಧಿಸದೇ ಅವರ ಮನೆ ಮೇಲೂ ಯೋಗಿ ಸರ್ಕಾರ ಬುಲ್ಡೋಜರ್ ಪ್ರಯೋಗಿಸಿದೆ. ಇಬ್ಬರು ಬಂಧಿತರ ಮನೆಗಳನ್ನ ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದೆ. ಬಂಧಿತ ಮುಜಾಮಿಲ್ ಹಾಗೂ ಅಬ್ದುಲ್ ವಾಕಿರ್ ಮನೆಯನ್ನ ಬುಲ್ಡೋಜರ್ ಧ್ವಂಸಗೊಳಿಸಿವೆ.
ಇತ್ತ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದ್ದ 70 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನು ಮೊನ್ನೆಯ ಹಿಂಸಾಚಾರದಲ್ಲಿ ಬಲಿಯಾದ ಇಬ್ಬರ ಸಾವಿನ ಪ್ರಕರಣವನ್ನ ತನಿಖೆ ಮಾಡಲು ಎಸ್ಐಟಿ ತಂಡ ರಚಿಸಲಾಗಿದೆ. ಅಲ್ಲದೆ ಸೂಕ್ಷ್ಮ ಜಿಲ್ಲೆಗಳಲ್ಲಿ ಹೆಚ್ಚುವರಿ ಸೇನಾ ಪಡೆ ನಿಯೋಜಿಸಲಾಗಿದೆ.
ಒಂದು ಕಡೆ ದೇಶಾದ್ಯಂತ ಕಿಡಿ ಹೊತ್ತಿಸಿ, ಕಲ್ಲು ತೂರಿ ಹಿಂಸಾಚಾರಕ್ಕೆ ಕಾರಣವಾದವರನ್ನ ಪೊಲೀಸರು ಹೆಡೆಮುರಿ ಕಟ್ಟುತ್ತಿದ್ದಾರೆ. ಮತ್ತೊಂದೆಡೆ ನೂಪುರ್ ಶರ್ಮಾರ ಬಂಧನಕ್ಕೆ ಕೂಗು ಜೋರಾಗಿದೆ. ಈ ಎಲ್ಲದರ ಮಧ್ಯೆ ನೂಪುರ್ ಶರ್ಮಾರಿಗೆ ಹಿಂದೂ ಸ್ವಾಮೀಜಿಗಳಿಂದ ಬಹಿರಂಗವಾಗಿ ಬೆಂಬಲ ವ್ಯಕ್ತವಾಗ್ತಿದೆ.
ನಿಜ.. ಕಾಶಿಯ ಧರ್ಮ ಪರಿಷತ್ನಲ್ಲಿ ಹಿಂದೂ ಸ್ವಾಮೀಜಿಗಳು ನೂಪುರ್ ಶರ್ಮಾರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ನೂಪುರ್ ಶರ್ಮಾ ಭಾರತದ ಮಗಳು ಅಂತಾ ಕರೆದಿದ್ದಾರೆ. ಅಲ್ಲದೆ ಧರ್ಮ ಪರಿಷತ್ನಲ್ಲಿ 16 ನಿರ್ಣಯಗಳನ್ನ ಕೈಗೊಂಡಿದ್ದಾರೆ.
ಶುಕ್ರವಾರದಂದು ಹಿಂಸಾಚಾರಕ್ಕೆ ಕಾರಣವಾದ ಪ್ರತಿಭಟನಾಕಾರರನ್ನ ಈ ಕೂಡಲೇ ಬಂಧಿಸಿ ನಿಷೇಧಿಸಬೇಕು. ಕಲ್ಲು ತೂರಾಟ ನಡೆದಿದ್ದ ಮಸೀದಿಯನ್ನು ಈ ಕೂಡಲೇ ಮುಚ್ಚಬೇಕು. ದಾಳಿಕೋರರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಬೇಕು. ನೂಪುರ್ ಶರ್ಮಾಗೆ ಅತ್ಯಾಚಾರ ಬೆದರಿಕೆ ಹಾಕುವವರ ಮೇಲೆ ಕ್ರಮಕೈಗೊಳ್ಳಬೇಕು. ಪ್ರತಿ ಶುಕ್ರವಾರ ದ್ವೇಷ ಭಾಷಣ ಮಾಡುವ ಮೌಲಾನಾಗಳನ್ನು ಬಂಧಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಇದಲ್ಲದೆ ಪ್ರತಿ ಮಸೀದಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಮೌಲಾನಾಗಳ ಭಾಷಣವನ್ನು ರೆಕಾರ್ಡ್ ಮಾಡಬೇಕು.
ಹೀಗೆ ಧರ್ಮ ಪರಿಷತ್ನಲ್ಲಿ ಹಿಂದೂ ಧರ್ಮದರ್ಶಿಗಳು 16 ನಿರ್ಣಯಗಳನ್ನ ಕೈಗೊಂಡಿದ್ದಾರೆ. ನೂಪುರ್ ಶರ್ಮಾರಿಗೆ ಧರ್ಮದರ್ಶಿಗಳು ಬಹಿರಂಗವಾಗಿ ಬೆಂಬಲವನ್ನೂ ಸೂಚಿಸಿದ್ದಾರೆ. ಒಟ್ಟರೆ ನೂಪುರ್ ಶರ್ಮಾರ ಹೇಳಿಕೆಗೆ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗ್ತಿದೆ. ಈ ಮಧ್ಯೆ ಭಾರತ ಮಾತ್ರ ಹೊತ್ತಿ ಉರಿಯುತ್ತಿದೆ.


























