ಪುತ್ತೂರು: ಯುವ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹಸ್ತಕ್ಷೇಪ ಮಾಡಿ ಪಕ್ಷ ವಿರೋಧಿಯಾಗಿ ನಡೆದುಕೊಂಡ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಹುದ್ದೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಪುತ್ತೂರು ಯುವ ಕಾಂಗ್ರೆಸ್ ಉಪಾಧ್ಯಕ್ಷ ಹನೀಫ್ ಪುಣ್ಚತ್ತಾರು ರವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರಿಗೆ ಮನವಿ ಮಾಡಿದ್ದಾರೆ.

ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಪುತ್ತೂರಿನಲ್ಲಿ ಕಳೆದ ಒಂದೂವರೆ ವರ್ಷದಿಂದ ಉತ್ತಮ ಸಂಘಟನೆಯಾಗಿ ಬೆಳೆಯುತ್ತಿದೆ. ಪಕ್ಷದ ಎಲ್ಲಾ ಹಿರಿಯರ ವಿಶ್ವಾಸದೊಂದಿಗೆ ಮುಂದುವರಿಯುವ ಪ್ರಯತ್ನ ಮಾಡುತ್ತಾ ಇದೆ. ಆದರೆ ಪಕ್ಷದ ಬ್ಲಾಕ್ ಅಧ್ಯಕ್ಷರು ಮತ್ತು ಮಾಜಿ ಶಾಸಕರು ಯುವ
ಕಾಂಗ್ರೆಸ್ ಕಾರ್ಯಕ್ರಮಕ್ಕೆ ಆಗಾಗ್ಗೆ ಅಡ್ಡಿಪಡಿಸುತ್ತಾ ಪಕ್ಷ ಬೆಳೆಸುವಲ್ಲಿ ತಡೆಯೊಡ್ಡುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಅವರು ಪುತ್ತೂರಿಗೆ ಬಂದಾಗ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಶಾಸಕರು ಎಲ್ಲರನ್ನೂ ಆಹ್ವಾನಿಸಿದ್ದರೂ ಅವರೆಲ್ಲರೂ ಗೈರಾಗಿ ಪಕ್ಷದ ವರ್ಚಸ್ಸನ್ನು ಹಾಳು ಮಾಡಿದ್ದಾರೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ಹಿತದೃಷ್ಠಿಯಲ್ಲಿ ‘ಹಸ್ತ ಲಾಘವ’ ಹೆಸರಲ್ಲಿ ಇದೇ ಜೂ. 26 ರಂದು ಆರ್ಯಾಪು ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಪೂರ್ವಭಾವಿಯಾಗಿ ಪುತ್ತೂರು ಬ್ಲಾಕ್ ಅಧ್ಯಕ್ಷರು, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರು ಮತ್ತು ಮಾಜಿ ಶಾಸಕರ ಮೌಖಿಕ ಒಪ್ಪಿಗೆ ಪಡೆದೇ ಈ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮದ ವ್ಯವಸ್ಥೆಗಳೆಲ್ಲಾ ನಡೆಸಿರುವಾಗ ಬ್ಲಾಕ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ ಯವರು ಏಕಾಏಕಿ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹಸಕ್ಷೇಪ ಮಾಡಿ ಕಾರ್ಯಕ್ರಮ ರದ್ದು ಮಾಡಲು ನೋಟಿಸು ಜಾರಿ ಮಾಡಿದ್ದಾರೆ. ಇದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದೆ.
ಯುವ ಕಾಂಗ್ರೆಸ್ಸಿನ ಅಧಿಕಾರವನ್ನು ಮೊಟಕು ಗೊಳಿಸುವ ಪ್ರಯತ್ನ ಮಾಡಿದ್ದಾರೆ. ಇದು ಪಕ್ಷ ವಿರೋಧಿ ನಿಲುವಾಗಿದೆ. ಇದರ ಗಂಭೀರತೆಯನ್ನು ಅರಿತು ಕೂಡಲೇ ಎಂ. ಬಿ.ವಿಶ್ವನಾಥ ರೈ
ಯವರನ್ನು ಅಮಾನತು ಮಾಡಬೇಕು. ಇಲ್ಲವಾದಲ್ಲಿ ಪಕ್ಷ ಇನ್ನಷ್ಟು ದುರ್ಬಲಗೊಳ್ಳಲಿದೆ ಎಂದು ಹನೀಫ್ ಅವರು ಡಿಕೆಶಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

























