ಉಡುಪಿ: ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಗಾಯಗೊಂಡ ಘಟನೆ ಉಡುಪಿ ಸಮೀಪದ ಆದಿ ಉಡುಪಿಯ ಮೂಡುಬೆಟ್ಟು ಎಂಬಲ್ಲಿ ನಡೆದಿದೆ.

ಮೂಡುಬೆಟ್ಟು ನಿವಾಸಿ ಗೋಪಾಲ ಎಂಬವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಈ ಪೈಕಿ ಸಾವಿತ್ರಿ ಹಾಗೂ ಇನ್ನೊಬ್ಬರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಸ್ಫೋಟದ ತೀವ್ರತೆಗೆ ಮನೆಯ ಪೀಠೋಪಕರಣಗಳು ಸುಟ್ಟು ಹೋಗಿವೆ. ಕಿಟಕಿಯ ಗಾಜುಗಳು ಒಡೆದು ಹೋಗಿದ್ದು, ಅಡುಗೆ ಕೋಣೆಯ ಪಾತ್ರೆಗಳು, ಇತರ ಸಾಮಗ್ರಿಗಳು ಚೆಲ್ಲಾ ಪಿಲ್ಲಿಯಾಗಿವೆ.

ಅಡುಗೆ ಕೋಣೆಯಲ್ಲಿದ್ದ ಸಿಲಿಂಡರ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿಯ ಕೆನ್ನಾಲಗೆ ಸಂಪೂರ್ಣ ಕೋಣೆಗೆ ವ್ಯಾಪಿಸಿದೆ.
ಅವಘಡ ಸಂಭವಿಸುತ್ತಿದ್ದಂತೆ ಮನೆಯೊಳಗಿದ್ದವರು ಹೊರಗೆ ಓಡಿ ಬಂದಿದ್ದಾರೆ. ಸ್ಥಳೀಯರು ಬೆಂಕಿ ನಂದಿಸಿದ್ದಾರೆ.


























