ಪುತ್ತೂರು: ಕಳೆದ 4 ವರ್ಷಗಳ ನನ್ನ ಶಾಸಕತ್ವದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 950 ಕೋಟಿ ರೂಪಾಯಿಗಳ ದೊಡ್ಡ ಮೊತ್ತದ ಅನುದಾನ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಬಂದಿದೆ. ಈ ಮೂಲಕ ಪುತ್ತೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ಬಿಜೆಪಿ ಗ್ರಾಮಾಂತರ ಮತ್ತು ನಗರ ಮಂಡಲಗಳ ಆಶ್ರಯದಲ್ಲಿ ಗುರುವಾರ ಇಲ್ಲಿನ ಪುತ್ತೂರು ಟೌನ್ ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಾನಾ ಕ್ಷೇತ್ರದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಮಾರು 67 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದ ಎಲ್ಲ ಗ್ರಾಪಂಗಳಲ್ಲಿ ಜಲಜೀವನ್ ಮಿಶನ್ ಅನುಷ್ಠಾನ ಮಾಡಲಾಗುತ್ತಿದೆ. 55 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಳಿಯೂರಿನಲ್ಲಿ ಬೃಹತ್ ಅಣೆಕಟ್ಟು- ಸಂಪರ್ಕ ರಸ್ತೆ ನಿರ್ಮಾಣವಾಗುತ್ತಿದೆ. 55 ಕೋಟಿ ರೂ. ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ನಡೆಯುತ್ತಿದೆ. ರಸ್ತೆಗಳು, ಶಾಲೆಗಳು, ಅಂಗನವಾಡಿ ಕೇಂದ್ರಗಳು, ಸೇತುವೆಗಳು, ಕಿಂಡಿ ಅಣೆಕಟ್ಟುಗಳು ಸೇರಿದಂತೆ ಸಮಗ್ರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಡಿಯಲ್ಲಿ ಎಎಂಆರ್ ಅಣೆಕಟ್ಟಿನಿಂದ ನೀರು ತರಿಸಲು 375 ಕೋಟಿ ರೂ.ಗಳ ಡಿಪಿಆರ್ ಸಿದ್ಧಗೊಂಡಿದೆ. ಪುತ್ತೂರು ಸರಕಾರಿ ಆಸ್ಪತ್ರೆಯನ್ನು 300 ಹಾಸಿಗೆಗಳ ಆಸ್ಪತ್ರೆಯಾಗಿ ಮರು ನಿರ್ಮಿಸಲು ಡಿಪಿಆರ್ ರೂಪಿಸಲಾಗಿದ್ದು, ಸಂಪುಟದ ಅಂಗೀಕಾರಕ್ಕೆ ಕಾಯುತ್ತಿದೆ ಎಂದವರು ಹೇಳಿದರು.

ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭಗೊಂಡಿದೆ. ಅನೇಕ ಸಾಧಕರಿಗೆ ಸರಕಾರದಿಂದಲೇ ಉನ್ನತ ಮಟ್ಟದ ಪುರಸ್ಕಾರಗಳು ಸಿಕ್ಕಿವೆ. ಎಲ್ಲರಿಗೂ ಸರಕಾರ ಪ್ರಶಸ್ತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಎಲೆ ಮರೆಯ ಕಾಯಿಯಂತಿರುವ ಅನೇಕ ಸಾಧಕರನ್ನು ಇಂದು ಮೋದಿ ಅವರ ೮ ವರ್ಷಗಳ ಸೇವೆ- ಸುಶಾಸನ- ಬಡವರ ಕಲ್ಯಾಣವೆಂಬ ಸಾರ್ಥಕ ಆಡಳಿತದ ನೆನಪಿನಲ್ಲಿ ಸನ್ಮಾನಿಸಲಾಗುತ್ತಿದೆ ಎಂದರು.

ಬಿಜೆಪಿ ಜಿಲ್ಲಾ ಓಬಿಸಿ ಮೋರ್ಛಾದ ಅಧ್ಯಕ್ಷ ಆರ್. ಸಿ. ನಾರಾಯಣ್ ಮಾತನಾಡಿ, ಪುತ್ತೂರಿನ ಸಾಂಸ್ಕೃತಿಕ ಹಿರಿಮೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಸಾವಿರಾರು ಸಾಧಕರು ಇಲ್ಲಿದ್ದಾರೆ. ಅವರಲ್ಲಿ ಆಯ್ದವರನ್ನು ಇಂದು ಸನ್ಮಾನಿಸಲಾಗುತ್ತಿದೆ. ಇದು ಜಿಲ್ಲೆಯಲ್ಲೇ ಅತ್ಯಂತ ಅಪೂರ್ವ ಕಾರ್ಯಕ್ರಮ ಎಂದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರೂ, ಪುತ್ತೂರು ಬಿಜೆಪಿ ಪ್ರಭಾರಿಯೂ ಆಗಿರುವ ರಾಮದಾಸ್ ಬಂಟ್ವಾಳ್ ಮಾತನಾಡಿ, ಕೇವಲ ರಾಜಕಾರಣಿಗಳು ಮಾತ್ರ ದೇಶ ಕಟ್ಟಲು ಸಾಧ್ಯವಿಲ್ಲ. ನಾನಾ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದವರು ದೇಶ ನಿರ್ಮಾಣಕ್ಕೆ ಕೊಡುಗೆ ಸಲ್ಲಿಸಿದ್ದಾರೆ. ಅಂಥವರನ್ನು ಗೌರವಿಸಲಾಗುತ್ತಿದೆ ಎಂದರು.


ಪ್ರಧಾನಿ ನರೇಂದ್ರ ಮೋದಿ ಅವರು 8 ವರ್ಷಗಳಲ್ಲಿ ಒಂದು ದಿನವೂ ರಜೆ ಮಾಡದೆ ನಿರಂತರ ದೇಶಕ್ಕಾಗಿ ಕೆಲಸ ಮಾಡಿದ್ದಾರೆ. ಅವರು ಅಧಿಕಾರಕ್ಕೆ ಬಂದ ಕೂಡಲೇ ಮೊದಲು ಸಂಸತ್ ಭವನವನ್ನು ದೇವಾಲಯಕ್ಕೆ ಹೋಲಿಸಿ ಹೊಸ್ತಿಲಲ್ಲೇ ಸಾಷ್ಟಾಂಗ ನಮಿಸಿ ಒಳ ನಡೆದರು. ಈ ಮೂಲಕ ದೊಡ್ಡದೊಂದು ಪರಂಪರೆ ಹುಟ್ಟು ಹಾಕಿದರು. ನ ಖಾವೂಂಗಾ.. ನ ಖಾನೇದೂಂಗ ಎಂದು ಆರಂಭದಲ್ಲೇ ಪ್ರತಿಜ್ಞೆ ಮಾಡಿದ ಮೋದಿ, ತಾನೂ ಹಣ ಮಾಡೋದಿಲ್ಲ. ಇತರರು ಹಣ ಮಾಡಲು ಬಿಡುವುದೂ ಇಲ್ಲ ಎಂದು ಘೋಷಿಸಿದರು. ಇದರ ಫಲವಾಗಿ ಕಳೆದ ೮ ವರ್ಷಗಳಲ್ಲಿ ಮೋದಿ ಅವರು ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದೆ ಕೆಲಸ ಮಾಡಿದ್ದಾರೆ. ಜನಧನ್ ಖಾತೆ ಆರಂಭಿಸುವಾಗ ಅದರ ವಿರುದ್ಧ ಅನೇಕಾನೇಕ ಟೀಕೆಗಳು ಕೇಳಿ ಬಂದಿದ್ದವು. ಆದರೆ ಪ್ರಧಾನಿ ಇದಕ್ಕೆ ಕಿವಿಕೊಡದೆ ಜಾರಿ ಮಾಡಿದರು. ಇವತ್ತು ಸುಮಾರು 129 ಯೋಜನೆಗಳು ಈ ಖಾತೆಯ ಮೂಲಕ ಜನರಿಗೆ ತಲುಪುತ್ತಿವೆ. ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು ಒಂದೊಮ್ಮೆ ಒಂದು ಮಾತು ಹೇಳಿದ್ದರು. 100 ರೂ. ಅನುದಾನ ಮಂಜೂರು ಮಾಡಿದರೆ ಫಲಾನುಭವಿಗೆ ಕೇವಲ 15 ರೂ. ಮಾತ್ರ ಸಿಗುತ್ತದೆ. ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರವೇ ಇದಕ್ಕೆ ಕಾರಣ ಎಂದು ವಿಷಾದ ವ್ಯಕ್ತಪಡಿಸಿದ್ದರು. ಆದರೆ ಇವತ್ತು ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ರೈತರ ಖಾತೆಗೆ 6000 ರೂ. ಬಿಡುಗಡೆ ಮಾಡಿದರೆ ಅಷ್ಟೂ ಹಣವೂ ಒಂದೇ ಸೆಕೆಂಡಿನಲ್ಲಿ ಫಲಾನುಭವಿಯ ಖಾತೆಗೆ ಸಿಗುತ್ತದೆ. ಒಂದೇ ಒಂದು ಪೈಸೆ ಕಡಿತವಾಗುತ್ತಿಲ್ಲ. ಆ ಮಟ್ಟಿನ ಕ್ರಾಂತಿ ನಡೆದಿದೆ ಎಂದರು.


110 ಸಾಧಕರಿಗೆ ಸನ್ಮಾನ:
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆಯ್ದ ೧೧೦ ಮಂದಿ ಸಾಧಕರನ್ನು ಈ ಸಂದರ್ಭದಲ್ಲಿ ಶಾಸಕರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ನಗರ ಮಂಡಲ ಪ್ರ. ಕಾರ್ಯದರ್ಶಿಗಳಾದ ಯುವರಾಜ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ, ಸಾಧಕರ ಸನ್ಮಾನ ಸಮಿತಿಯ ಸಂಚಾಲಕಿ ವಿದ್ಯಾ ಗೌರಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ ರೈ ಕೋರಂಗ ವೇದಿಕೆಯಲ್ಲಿದ್ದರು. ಸಾಧಕರ ಸನ್ಮಾನ ಸಮಿತಿಯ ಇನ್ನೋರ್ವ ಸಂಚಾಲಕರಾದ ಅರುಣ್ ವಿಟ್ಲ ಸ್ವಾಗತಿಸಿದರು. ಸೇವೆ- ಸುಶಾಸನ- ಬಡವರ ಕಲ್ಯಾಣ ಕಾರ್ಯಕ್ರಮಗಳ ಮಂಡಲ ಸಂಚಾಲಕರಾದ ಬೂಡಿಯಾರ್ ರಾಧಾಕೃಷ್ಣ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃಷ್ಣವೇಣಿ ಮುಳಿಯ ಪ್ರಾರ್ಥಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಗೌರಿ ವಂದಿಸಿದರು.
































