ಸುಳ್ಯ: ಪ್ರತಿಷ್ಠಿತ ಕುಟುಂಬದ ಜನಪ್ರತಿನಿಧಿ ಯೊಬ್ಬರ ಮಗಳು ಮನೆ ಬಿಟ್ಟು ಪ್ರೀತಿಸಿದ ಯುವಕನನ್ನು ಮದುವೆಯಾದ ವಿಚಾರ ಪೊಲೀಸ್ ಠಾಣಾ ಮೆಟ್ಟಿಲೇರಿದ ಘಟನೆ ನಡೆದಿದೆ.
ಯುವ ವೈದ್ಯೆಯಾಗಿರುವ ಸುಳ್ಯದ ತರುಣಿ ಕೇರಳದ ಯುವಕನನ್ನು ಕಾಂಞಂಗಾಡ್ ದೇವಸ್ಥಾನದಲ್ಲಿ ಮದುವೆ ಯಾದ ಘಟನೆ ವರದಿಯಾಗಿದ್ದು, ಮನೆಯವರು ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಹಾಗೂ ತಮ್ಮ ಮಗಳ ಮನವೊಲಿಸಿ ಕರೆತರುವ ಪ್ರಯತ್ನ ಮಾಡಿದರಾದರೂ ಪ್ರಯೋಜನವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಸುಳ್ಯದ ಗ್ರಾಮ ಪಂಚಾಯತ್ ಒಂದರ ಪ್ರಮುಖ ಜನಪ್ರತಿನಿಧಿಯೋರ್ವರ ಮಗಳನ್ನು ಕೇರಳ ಮೂಲದ ಅನ್ಯಜಾತಿಯ ಯುವಕ ವಿವಾಹವಾಗಿದ್ದು, ಈ ಬಗ್ಗೆ ಆತ ಆಕೆಯನ್ನು ವಶೀಕರಣ ಮಾಡಿ ಮದುವೆ ಮಾಡಿಕೊಂಡಿದ್ದಾನೆ ಎಂದು ಸುದ್ದಿಗಳು ಹರಿದಾಡುತ್ತಿತ್ತು, ಈ ಬಗ್ಗೆ ಯುವತಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವುದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ‘ನಾನೇ ಆತನನ್ನು ಪ್ರೀತಿಸಿ ಮದುವೆಯಾಗಿದ್ದೇನೆ ನನ್ನನ್ನು ಯಾರೂ ವಶೀಕರಣ ಮಾಡಲಿಲ್ಲ, ಅಷ್ಟೇ ಅಲ್ಲದೇ ನಮಗೆ ಮದುವೆ ವಯೋಮಿತಿ ಆಗಿದ್ದು, ನಮ್ಮ ಜೀವನದ ಬಗ್ಗೆ ನಮಗೆ ಯೋಚಿಸುವ, ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ’ ಎಂದು ಹೇಳಿದ್ದಾಳೆ.
ನನ್ನ ಪತಿಯ ಮನೆಯವರಾಗಲಿ, ಅಥವಾ ಆತನಾಗಲಿ ನನ್ನನ್ನು ವಶೀಕರಣ ಮಾಡಿಲ್ಲ, ನಾನು ನನ್ನ ಸ್ವ ಇಚ್ಛೆಯಿಂದ ಪ್ರೀತಿಸಿ ಮದುವೆಯಾಗಿದ್ದೇನೆ., ನಾವು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದೆವು ನನ್ನ ಮನೆಯಲ್ಲಿ ಒಪ್ಪದ ಕಾರಣ ನಾನು ಮನೆ ಬಿಟ್ಟು ಬಂದು, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ನಮ್ಮ ಬಗ್ಗೆ ಅಪಪ್ರಚಾರ ಮಾಡಬೇಡಿ, ನಮ್ಮಷ್ಟಕ್ಕೆ ಬದುಕಲು ಬಿಡಿ ಎಂದು ಯುವತಿ ಹೇಳಿದ್ದಾಳೆ.
ಇಬ್ಬರು ಪ್ರೀತಿಸಿ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದು, ಈ ಬಗ್ಗೆ ಯುವತಿಯ ಮನೆಯವರು ಕಾಞಂಗಾಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೇ ಯುವಕ-ಯುವತಿಯರಿಬ್ಬರು ಮೇಜರ್ ಆಗಿದ್ದ ಕಾರಣ ವಿಚಾರಣೆ ನಡೆಸಿ ಅವರನ್ನು ಕಳುಹಿಸಿದ್ದರು. ಅಷ್ಟೇ ಅಲ್ಲದೇ ಯುವತಿಗೆ ಬೇರೆ ಯುವಕನ ಜೊತೆ ಮನೆಯವರು ಮದುವೆ ಗೊತ್ತು ಮಾಡಿದ್ದು, ಈ ಸಂದರ್ಭದಲ್ಲಿ ಯುವತಿ ತಾನು ಪ್ರೀತಿಸಿದ ಯುವಕನ ಜೊತೆ ತೆರಳಿ ಮದುವೆಯಾಗಿದ್ದಳು ಎನ್ನಲಾಗಿದೆ.



























