ಬಂಟ್ವಾಳ: ಬಜರಂಗದಳದ ವಿಟ್ಲ ಪ್ರಖಂಡ ಸಂಚಾಲಕರಾದ ಚಂದ್ರಹಾಸ ಕನ್ಯಾನ ರವರಿಗೆ ತಂಡವೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಜೂ.19 ರಂದು ಸಾಲೆತ್ತೂರಿನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಚಂದ್ರಹಾಸ ರವರು ನೀಡಿದ ದೂರಿನಂತೆ ಪ್ರಶಾಂತ್, ತೇಜಸ್, ಗಿರೀಶ್, ಗಣೇಶ್, ಶರತ್, ಧನು, ಮುನ್ನಾ, ಚೇತನ, ವಿನೀತ್, ದಿನೇಶ್, ಶಶಿಕುಮಾರ್ ಹಾಗೂ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಗಳೂರು ಕೃಷ್ಣಪುರ ನಿವಾಸಿ ಪ್ರಶಾಂತ್ ನೀಡಿದ ದೂರಿನಂತೆ ಚಂದ್ರಹಾಸ, ನಾಗೇಶ್, ದೇವದಾಸ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂ.19 ರಂದು ಸಂಜೆ ಸಾಲೆತ್ತೂರು-ಅಗರಿ ಎಂಬಲ್ಲಿ ಪ್ರಶಾಂತ್, ತೇಜಸ್ ರವರ ತಂಡ ಚಂದ್ರಹಾಸ ರವರ ಮೇಲೆ ಹಲ್ಲೆ ನಡೆಸಿದ್ದು, ‘ಈ ಸಂಘಟನೆಡ್ ಭಾರಿ ರಾಪನಾ..??’ ನಿನನ್ ಕೆರಂದೆ ಬುಡಾಯೇ ಎಂದೆಲ್ಲಾ ಹೇಳಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಸಂಘಟನೆಯ ಜವಾಬ್ದಾರಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಏಳಿಗೆಯನ್ನು ಸಹಿಸದೇ ಈ ರೀತಿಯಾಗಿ ಕೃತ್ಯವೆಸಗಿದ್ದಾರೆ ಎಂದು ಚಂದ್ರಹಾಸ ರವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 101/2022 ಕಲಂ: 143, 147,148,323,324,307,506 ಜೊತೆಗೆ 149 ಬಾಧಂಸಂ ರಂತೆ ಪ್ರಕರಣ ದಾಖಲಾಗಿದೆ.
ಪ್ರಶಾಂತ್ ರವರು ಹುಡುಗರ ಮಧ್ಯೆ ಇದ್ದ ವೈಮನಸ್ಸಿನ ಬಗ್ಗೆ ಮಾತನಾಡಲು ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ನಾಗೇಶ್ ರವರ ಮನೆಯ ಬಳಿ ಹೋಗಿ ನಾಗೇಶ್, ಚಂದ್ರಹಾಸ, ದೇವದಾಸರವರೊಂದಿಗೆ ಮಾತನಾಡುತ್ತಿರುವಾಗ ಮಾತಿಗೆ ಮಾತು ಬೆಳೆದು ಪ್ರಶಾಂತ್ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ, ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಯಾವುದೋ ದ್ವೇಷದಿಂದ ಈ ಕೃತ್ಯವೆಸಗಿದ್ದಾರೆ ಎಂದು ಪ್ರಶಾಂತ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 102/2022 ಕಲಂ: 143, 144, 147, 148, 323,307,506 ಜೊತೆಗೆ 149 ಬಾಧಂಸಂ ರಂತೆ ಪ್ರಕರಣ ದಾಖಲಾಗಿದೆ..



























