ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಹಾಸನ ಜಿಲ್ಲೆಯ ಹಲವೆಡೆ ಇಂದು ಬೆಳಗಿನ ಜಾವ ಭೂಮಿ ಕಂಪಿಸಿದೆ. ಬೆಳಗಿನಜಾವ 4.35ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಇಲ್ಲಿನ ಜನತೆಗಾಗಿದ್ದು, ಸಿಹಿ ನಿದ್ದೆಯಲ್ಲಿದ್ದ ಜನತೆ ಭಯಬಿದ್ದು, ಮನೆಯಿಂದ ಹೊರ ಓಡಿ ಬಂದಿದ್ದಾರೆ.
ಎಲ್ಲೆಲ್ಲಿ ಕಂಪನದ ಅನುಭವ..?
ಹೊಳೆನರಸೀಪುರ, ಅರಕಲಗೂಡು ತಾಲೂಕು, ಮುದ್ದನಹಳ್ಳಿ, ಹನೆಮಾರನಹಳ್ಳಿ, ಕಾರಹಳ್ಳಿ, ಗ್ರಾಮಗಳಲ್ಲಿ ಹಾಗೂ ಹಾಸನ ತಾಲೂಕಿನ ಮಲ್ಲೆದೇವರಪುರ, ಕಾರ್ಲೆ ಅಂಕನಹಳ್ಳಿ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಸ್ಪಷ್ಟ ಅನುಭವವಾಗಿದೆ. ಘಟನೆಯನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ದೃಢಪಡಿಸಿದ್ದಾರೆ.
ನಸುಕಿನ 4.38ರಲ್ಲಿ ಭೂಮಿ ಲಘುವಾಗಿ ಕಂಪಿಸಿದೆ. ಅರಕಲಗೂಡು ಮತ್ತು ಹೊಳೆನರಸೀಪುರ ತಾಲೂಕುಗಳ ಹಲವು ಗ್ರಾಮಗಳಲ್ಲಿ ಜನರಿಗೆ ಭೂಮಿಯು ಕಂಪಿಸಿದ್ದು, ಸ್ಪಷ್ಟವಾಗಿ ಅನುಭವಕ್ಕೆ ಬಂದಿದೆ. ಭೂಮಿಯು ಕಂಪಿಸುವ ಮೊದಲು ದೊಡ್ಡ ಸದ್ದು ಕೇಳಿಸಿತು ಎಂದು ಹಲವರು ತಮ್ಮ ನೆನಪಿಸಿಕೊಂಡಿದ್ದಾರೆ. ಅರಕಲಗೂಡು ಪಟ್ಟಣ,ತಾಲೂಕಿನ ಮುದ್ದನಹಳ್ಳಿ, ಹನೆಮಾರನಹಳ್ಳಿ, ಕಾರಳ್ಳಿ, ಹೊಳೆನರಸೀಪುರ ತಾಲೂಕಿನ ಚಿಟ್ನಳ್ಳಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಭೂಮಿಯು ಕಂಪಿಸಿದ್ದು ಸ್ಪಷ್ಟವಾಗಿ ಜನರ ಅರಿವಿಗೆ ಬಂದಿದೆ. ಭೂಮಿಯು ಅಲುಗಾಡುತ್ತಿರುವ ಅನುಭವವಾದ ತಕ್ಷಣ ಜನರು ಭಯಗೊಂಡು ಮನೆಗಳಿಂದ ಹೊರಗೆ ಓಡಿ ಬಂದರು. ಈ ಘಟನೆಯು ಜನರಲ್ಲಿ ಭೀತಿ ಉಂಟು ಮಾಡಿದೆ.
ಕೊಡಗಿನ ವಿವಿಧೆಡೆ ಭೂಕಂಪ
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ರೇಂಜರ್ ಬ್ಲಾಕ್, ನೇಗಳ್ಳೆ ಗ್ರಾಮದಲ್ಲಿ ಹಲವರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮಡಿಕೇರಿ ತಾಲೂಕಿನ ಮಡಿಕೇರಿ ನಗರ ಮತ್ತು ದೇವಸ್ತೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಜನರಿಗೆ ಇಂಥದ್ದೇ ಅನುಭವವಾಗಿದೆ. ನಸುಕಿನ 4:37ಕ್ಕೆ ಭೂಕಂಪನವಾಗಿದೆ ಎಂದು ಮೂಲಗಳು ದೃಢಪಡಿಸಿವೆ.