ಬಂಟ್ವಾಳ: ಉಚಿತವಾಗಿ ನಡೆಯುವ ವೈದ್ಯಕೀಯ ಶಿಬಿರಗಳನ್ನು ತಾತ್ಸಾರ ಮನೋಭಾವನೆಯಿಂದ ನೋಡುವುದು ನಾವು ಮಾಡುವ ದೊಡ್ಡ ತಪ್ಪು. ಆರೋಗ್ಯ ಸೇವೆಗಳು ಅತ್ಯಂತ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಉಚಿತ ವೈದ್ಯಕೀಯ ಶಿಬಿರಗಳ ಅನಿವಾರ್ಯತೆ ಇದೆ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.

ಶ್ರೀ ಸತ್ಯಸಾಯಿ ಸೇವಾ ಸಮಿತಿ ಮಂಗಳೂರು ಮತ್ತು ಬಿ.ಸಿ.ರೋಡು ಇವರ ಆಶ್ರಯದಲ್ಲಿ ಮಾಣಿ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ಮಾಣಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಾಣಿ ವಲಯ ಇವರ ಸಹಕಾರದೊಂದಿಗೆ, ಮಾಣಿ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಜರುಗಿದ ಉಚಿತ ವೈದ್ಯಕೀಯ, ದಂತ ಹಾಗೂ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಬಿರವನ್ನು ಆಯೋಜಿಸುವುದು ಕಷ್ಟದ ಕೆಲಸ. ಸಂಘ ಸಂಸ್ಥೆಗಳ ಸಹಕಾರ ಇಲ್ಲದೇ ಇದ್ದರೆ ಯಾವುದೂ ಕೂಡಾ ಅಸಾಧ್ಯ. ಇಂದಿನ ಶಿಬಿರದ ಯಶಸ್ಸಿನ ಹಿಂದೆ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯವರ ಕಾರ್ಯ ಶ್ಲಾಘನೀಯ ಮತ್ತು ಸಹಕರಿಸಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಹಾಗೂ ಸೇವೆಯನ್ನು ನೀಡಿದ ಯೇನಪೋಯ ಆಸ್ಪತ್ರೆಯ ಎಲ್ಲಾ ವೈದ್ಯರುಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಶಿಬಿರವನ್ನು ಉದ್ಘಾಟಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ರವರು, ವೈದ್ಯಕೀಯ ಸೇವೆಯ ಅಗತ್ಯತೆ ಎಷ್ಟು ಎನ್ನುವುದು ಕೋವಿಡ್ ಸಾಂಕ್ರಾಮಿಕ ರೋಗದ ತುರ್ತು ಸಂದರ್ಭದಲ್ಲಿ ಎಲ್ಲರಿಗೂ ತಿಳಿದಿದೆ. ಈ ರೀತಿಯ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುಮಾರು 500ಕ್ಕಿಂತ ಹೆಚ್ಚಿನ ಫಲಾನುಭವಿಗಳು ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.
ಮಾಣಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಡಾ.ಶ್ರೀನಾಥ್ ಆಳ್ವ, ದೇರಳಕಟ್ಟೆ ಯೇನಪೋಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜುನೈದ್, ಡಾ.ಸಿರಾಜ್, ಸಾರ್ವಜನಿಕ ಸಂಪರ್ಕಾಧಿಕಾರಿ ಭರತ್, ಸತ್ಯಸಾಯಿ ವೈದ್ಯಕೀಯ ವಿಭಾಗದ ರಾಜ್ಯ ಸಂಯೋಜಕ ಚಂದ್ರಶೇಖರ ನಾಯ್ಕ್, ಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ, ಮಾಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ ಮುಖ್ಯ ಅತಿಥಿಗಳಾಗಿದ್ದರು.

ಶಿಬಿರದ ಸಂಯೋಜಕ ಡಾ.ಮನೋಹರ್ ರೈ, ಲಯನ್ಸ್ ಕ್ಲಬ್ ಕಾರ್ಯದರ್ಶಿ ನಾರಾಯಣ ಸಾಲ್ಯಾನ್, ಕೋಶಾಧಿಕಾರಿ ರತ್ನಾಕರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಮಾಣಿ ಗ್ರಾಮ ಪಂಚಾಯತ್ ಸದಸ್ಯರಾದ ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ವಿನೋದಾ, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಸತ್ಯಸಾಯಿ ಸೇವಾ ಸಂಸ್ಥೆಯ ನಿರ್ದೇಶಕ ಸುಹಾನ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ಉಮೇಶ್ ಬರಿಮಾರು ವಂದಿಸಿದರು.





























