ಕಾಸರಗೋಡು: ಗಲ್ಫ್ ಉದ್ಯೋಗಿಯಾದ ಯುವಕನೋರ್ವನನ್ನು ಅಪಹರಿಸಿ ಕೊಲೆಗೈದು ಆಸ್ಪತ್ರೆಗೆ ತಲುಪಿಸಿ ತಂಡವು ಪರಾರಿಯಾದ ಘಟನೆ ಜೂ.26 ರಂದು ಬಂದ್ಯೋಡ್ ನಲ್ಲಿ ನಡೆದಿದೆ.
ಸೀತಾಂಗೋಳಿ ಮುಗುವಿನ ಅಬೂಬಕ್ಕರ್ ಸಿದ್ದಿಕ್(32) ಕೊಲೆಗೀಡಾದ ಯುವಕ.
ಸಿದ್ದಿಕ್ ಶನಿವಾರವಷ್ಟೇ ಗಲ್ಫ್ ನಿಂದ ಊರಿಗೆ ಬಂದಿದ್ದು, ನಿನ್ನೆ ಮಧ್ಯಾಹ್ನ ಪೈವಳಿಕೆ ನಿವಾಸಿ ಸೇರಿದಂತೆ ಇಬ್ಬರು ಕಾರಿನಲ್ಲಿ ಸಿದ್ದಿಕ್ ನನ್ನು ಅಪಹರಿಸಿದ್ದು, ಬಳಿಕ ರಾತ್ರಿ ಬಂದ್ಯೋಡಿನ ಆಸ್ಪತ್ರೆಗೆ ವಾಹನವೊಂದರಲ್ಲಿ ತಲುಪಿಸಿದ ತಂಡವು ಕೆಲ ನಿಮಿಷದಲ್ಲೇ ಪರಾರಿಯಾಗಿದೆ ಎನ್ನಲಾಗಿದೆ.
ವೈದ್ಯರು ತಪಾಸಣೆ ನಡೆಸಿದಾಗ ಯುವಕ ಮೃತಪಟ್ಟಿರುವುದು ದೃಢಪಟ್ಟಿದ್ದು, ಬಳಿಕ ಆಸ್ಪತ್ರೆ ಅಧಿಕಾರಿಗಳು ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದು , ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹಲ್ಲೆಯಿಂದ ಯುವಕನ ದೇಹದಲ್ಲಿ ಗಾಯಗಳು ಕಂಡು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದ್ದು , ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

























