ಪುತ್ತೂರು: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸುಳ್ಯ ಕಾಮಧೇನು ಟ್ರಸ್ಟ್ ವತಿಯಿಂದ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮೆಷಿನನ್ನು ಜೂ.28 ರಂದು ಕೊಡುಗೆಯಾಗಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ಗೌಡ ಪಿ. ಮಾತನಾಡಿ, ಸ್ಯಾನಿಟರಿ ಪ್ಯಾಡ್ ಗಳೂ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಇದ್ದರೆ, ಕಾಯಿಲೆಗೆ ಆಹ್ವಾನ ನೀಡಿದಂತೆ. ಸಹಾಯ ನೀಡಿದ ಟ್ರಸ್ಟ್ ನ ಗೌರವಾಧ್ಯಕ್ಷ , ಅಧ್ಯಕ್ಷೆ ಹಾಗೂ ಪದಾಧಿಕಾರಿಗಳಿಗೆ ಕೃತಜ್ಞತೆಗಳು ಎಂದು ಹೇಳಿದರು.
ಟ್ರಸ್ಟ್ ನ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ, ಮಹಿಳೆಯರು ಅಡುಗೆ ಕೆಲಸದಿಂದ ಹಿಡಿದು ರಾಷ್ಟ್ರಪತಿ ಹುದ್ದೆಯನ್ನೂ ನಿರ್ವಹಿಸುತ್ತಿರುವುದನ್ನು ಇಂದು ನಾವು ಕಾಣುತ್ತೇವೆ. ಸೇನೆಯಲ್ಲೂ ಕೂಡ ತನ್ನ ಬಲವನ್ನು ತೋರಿಸುವಲ್ಲಿ ಮಹಿಳೆಯರು ಅತ್ಯಂತ ಯಶಸ್ವಿ ಆಗಿದ್ದಾರೆ. ಯಾವುದೇ ಒಳ್ಳೆಯ ಕಾರ್ಯ ಮಾಡಲು ಸ್ವಲ್ಪವೂ ಅಳುಕು, ಅಂಜಿಕೆ ಇರಲೇಬಾರದು. ಹೆತ್ತವರನ್ನು, ಗುರುಗಳನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಹಾಯ ಬೇಕಾದ್ದಲ್ಲಿ ಖಂಡಿತ ಸ್ಪಂದಿಸಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.

ಪಶುಪತಿ ಶರ್ಮ ರವರು ಪ್ಯಾಡ್ ಬರ್ನಿಂಗ್ ಮೆಷಿನ್ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಕಾಮಧೇನು ಚಾರಿಟೇಬಲ್ ಟ್ರಸ್ಟ್ ನ ಗೌರವಾಧ್ಯಕ್ಷ ಮಾಧವ ಗೌಡ ಬೆಳ್ಳಾರೆ, ಪ್ರೊಫೆಸರ್ ಐವನ್ ಲೋಬೊ, ಶಿವನಾಥ್ ರೈ ಮೇಗಿನಗುತ್ತು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸಹನಾ, ದೀಕ್ಷಿತಾ ಪ್ರಾರ್ಥಿಸಿ, ರಚನಾ ರೈ ಸ್ವಾಗತಿಸಿ, ವಂದಿಸಿದರು. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.





























