ಕೊಡಗು: ಜೂನ್ 23 ರಂದು ಕೊಡಗು ಜಿಲ್ಲೆಯಲ್ಲಿ ಆರಂಭವಾಗಿದ್ದ ಭೂಕಂಪನ 8 ದಿನಗಳಾದರೂ ಇಂದಿಗೂ ನಿಂತಿಲ್ಲ. ದಿನ ಬೆಳಗಾದರೆ ಭೂಮಿ ಕಂಪಿಸುತ್ತಲೇ ಇದ್ದು ಜನರು ಜೀವ ಕೈಯಲ್ಲಿ ಹಿಡಿದು ಬದುಕು ದೂಡುವಂತೆ ಆಗಿದೆ.
ಜೂನ್ 23 ರಂದು ಹಾಸನ ಮತ್ತು ಮೈಸೂರು ಗಡಿ ಭಾಗದಲ್ಲಿ ಸಂಭವಿಸಿದ್ದ ಭೂಕಂಪದ ತೀವ್ರತೆ ಕೊಡಗು ಜಿಲ್ಲೆವರೆಗೂ ತಟ್ಟಿತ್ತು. ಪರಿಣಾಮ ಸೋಮವಾರಪೇಟೆ ತಾಲೂಕಿನ ರೇಂಜರ್ ಬ್ಲಾಕ್, ನೇಗಳ್ಳಿ ಮತ್ತು ಮಡಿಕೇರಿ ತಾಲೂಕಿನ ದೇವಸ್ತೂರಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು.
ಜೂನ್ 25 ರಂದು ಮೊದಲ ಬಾರಿಗೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕರಿಕೆ ಗ್ರಾಮದ 5.2 ಕಿಲೋ ಮೀಟರ್ ದೂರದಲ್ಲಿ 1.8 ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಅಂದಿನಿಂದ ಭೂಕಂಪನ ನಿಂತಿಲ್ಲ. ಪದೇ ಪದೇ ಭೂಮಿ ಕಂಪಿಸುತ್ತಲೇ ಇದ್ದು, ಕರಿಕೆ, ಚೆಂಬು, ಪೆರಾಜೆ, ಗೂನಡ್ಕ ಸೇರಿದಂತೆ ಹಲವೆಡೆ ಭೂಮಿ ಕಂಪಿಸುತ್ತಲೇ ಇದೆ. ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಲ್ಲಿ 27 ನೇ ತಾರೀಕು 3.0 ರಿಕ್ಟರ್ ಮಾಪಕದಲ್ಲಿ ಭೂಕಂಪನವಾಗಿತ್ತು.
1.8 ರಷ್ಟು ತೀವ್ರತೆ ದಾಖಲು
ಪರಿಣಾಮ ಹಲವೆಡೆ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದವು. ಈ ಘಟನೆ ನಡೆಯುತ್ತಿದ್ದಂತೆ ಬೆಂಗಳೂರಿನಿಂದ ರಾಜ್ಯ ನೈಸರ್ಗಿಕ ವಿಕೋಪ ನಿಯಂತ್ರಣ ಕೇಂದ್ರದಿಂದ ಇಬ್ಬರು ವಿಜ್ಞಾನಿಗಳ ತಂಡವೊಂದು ಜಿಲ್ಲೆಗೆ ಆಗಮಿಸಿ ಚೆಂಬು ಗ್ರಾಮದಲ್ಲಿ ಸೆಸ್ಮೋಗ್ರಫಿಯನ್ನು ಅಳವಡಿಸಿ ಭೂ ಕಂಪನದ ಬಗ್ಗೆ ಅಧ್ಯಯನ ಆರಂಭಿಸಿತ್ತು. ಆದರೆ ಗುರುವಾರ ತಡರಾತ್ರಿಯೂ ಚೆಂಬು ಗ್ರಾಮದಲ್ಲಿ 1.8 ರಿಕ್ಟರ್ ಮಾಪಕ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಇದರಿಂದ ನಿದ್ರೆಯಲ್ಲಿದ್ದರೂ ಜನರು ಬೆಚ್ಚಿಬಿದ್ದು ಎದ್ದು ಕುಳಿತಿದ್ದಾರೆ.
ಜೀವ ಭಯದಲ್ಲಿಯೇ ಕಾಲ ಕಳೆಯುತ್ತಿರುವ ಜನರು
ಅಷ್ಟೇ ಅಲ್ಲ ಶುಕ್ರವಾರ ಬೆಳಗ್ಗೆ ಕೂಡ 2.3 ಮ್ಯಾಗ್ನಿಟ್ಯೂಡ್ ನಲ್ಲಿ ಮತ್ತೆ ಭೂಮಿ ಕಂಪಿಸಿದೆ. ಇದರಿಂದಾಗಿ ಜನರು ಜೀವ ಕೈಯಲ್ಲಿ ಹಿಡಿದು ಕಾಲ ಕಳೆಯುವಂತೆ ಆಗಿದೆ. ಯಾವಾಗ ಏನು ಅನಾಹುತ ಆಗುತ್ತದೆಯೋ ಎನ್ನುವ ಆತಂಕದಲ್ಲಿಯೇ ಚೆಂಬು, ಪೆರಾಜೆ, ಗೂನಡ್ಕ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಜೀವ ಭಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
ಪ್ರಕೃತಿಯಲ್ಲಿ ನಡೆಯುವ ಸಹಜ ಕ್ರಿಯೆ
ಇತ್ತ ಜಿಲ್ಲಾಡಳಿತ ಪ್ರಾಕೃತಿಕ ವಿಕೋಪ ಪರಿಣಿತ ಅಧಿಕಾರಿ ಅನನ್ಯವಾಸುದೇವ ನೇತೃತ್ವದಲ್ಲಿ ಚೆಂಬು ಪಂಚಾಯಿತಿಯ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಭೂಕಂಪನ ಅಂದರೆ ಏನು, ಅದು ಹೇಗೆ ಆಗುತ್ತದೆ, ಅದನ್ನು ಸೆಸ್ಮೋಗ್ರಫಿ ಹೇಗೆ ದಾಖಲು ಮಾಡುತ್ತದೆ ಎಂದು ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಆ ಮೂಲಕ ಇದೆಲ್ಲವೂ ಪ್ರಕೃತಿಯಲ್ಲಿ ನಡೆಯುವ ಸಹಜ ಕ್ರಿಯೆಯಾಗಿದ್ದು, ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿಸುವ ಕೆಲಸ ಮಾಡುತ್ತಿದೆ.
ಭೂಕುಸಿತಕ್ಕೂ ಮುಂಚೆ ಭೂಕಂಪನ ಆಗಿತ್ತು
ಗ್ರಾಮಗಳ ಜನ ಸಾಮಾನ್ಯರ ಮಾತಿರಲಿ, ಗ್ರಾಮ ಪಂಚಾಯಿತಿಗಳ ಜನ ಪ್ರತಿನಿಧಿಗಳು ಕೂಡ ಆತಂಕದಿಂದ ಹೊರಬರಲು ಸಾಧ್ಯವಾಗಿಲ್ಲ. 2018 ರಲ್ಲಿ ಹಲವೆಡೆ ಭೂಕುಸಿತವಾಗುವುದುಕ್ಕೂ ಮೊದಲು ಜಿಲ್ಲೆಯಲ್ಲಿ ಭೂಕಂಪನವಾಗಿತ್ತು. ಬಳಿಕ ಭೂಕುಸಿತವಾಗಿತ್ತು. ಆಗ ಬಹುತೇಕ ಜನರು ಚೆಂಬು ಸುತ್ತಮುತ್ತ ಬಂದು ಆಶ್ರಯ ಪಡೆದಿದ್ದರು.




























