ಕಾರ್ಕಳ: ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದವರನ್ನು ಖಚಿತ ಮಾಹಿತಿ ಮೇರೆಗೆ ಸಿನಿಮಾ ಶೈಲಿಯಲ್ಲಿ ಪೊಲೀಸರು ಚೇಸ್ ಮಾಡಿದ ಘಟನೆ ಕಾರ್ಕಳದ ಹೆಬ್ರಿ ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.

ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ತಲ್ವಾರು ತೋರಿಸಿ ದನ ಕದಿಯುತ್ತಿದ್ದ ಉಡುಪಿಯ ಸಹೋದರರಾದ ಶಕೀಲ್ ಅಹಮದ್ ಮತ್ತು ಅಖಿಲ್ ಅಹಮದ್ ಬೇಳಂಜೆ ಗ್ರಾಮದ ಈಸ ಗದ್ದೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ಮಲಗಿದ ಎರಡು ಜಾನುವಾರುಗಳನ್ನು ಕಳವು ಮಾಡಿ ಅವುಗಳನ್ನು ಕಾರಿನಲ್ಲಿ ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ತುಂಬಿಸಿಕೊಂಡು ಸಾಗಿಸುತ್ತಿರುವಾಗ ಖಚಿತ ಮಾಹಿತಿಯ ಮೇರೆಗೆ ಹೆಬ್ರಿ ಪೊಲೀಸರು ಅವರನ್ನು ಸೆರೆಹಿಡಿದಿದ್ದಾರೆ.
ಈ ವೇಳೆ ಒಬ್ಬಾತ ಕಾಡಿಗೆ ಓಡಿ ಹೋಗಿ ಪರಾರಿಯಾಗಿದ್ದಾನೆ. ಇನ್ನು ಸಿಕ್ಕಿಬಿದ್ದ ಮತ್ತೋರ್ವ ಆರೋಪಿ ಕಾರು ಚಾಲಕ ದನಗಳನ್ನು ಕೊಂಡು ಹೋಗಿ ವಧೆ ಮಾಡಲು ಅದೇ ರೀತಿ ಕಸಾಯಿಖಾನೆಗೆ ಮಾರಾಟ ಮಾಡಲು ಹೋಗುತ್ತಿದ್ದೆವು ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಗೋವುಗಳನ್ನು ಹಿಂಸಾತ್ಮಕವಾಗಿ ಕಾರಿಗೆ ತುಂಬಿಸಿದ ಪರಿಣಾಮ ಕುತ್ತಿಗೆ ಮುರಿದು ಒಂದು ದನ ಸಾವಿಗೀಡಾಗಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.