ಸರಳ ವಾಸ್ತು ಖ್ಯಾತಿಯ ಗುರೂಜಿ ಚಂದ್ರಶೇಖರ್ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ.
ಭಕ್ತರ ಸೋಗಿನಲ್ಲಿ ಬಂದು, ಚಾಕು ಇರಿದು ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದಾರೆ.

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ಚಾಕುವಿನಿಂದ ಬರ್ಬರವಾಗಿ ಇರಿದು ಹತ್ಯೆ ಮಾಡಲಾಗಿದ್ದು, ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಘಟನೆ ನಡೆದಿದೆ.
ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಂದ್ರಶೇಖರ್ ಗುರೂಜಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವಂತೆ ಬಂದು ಹೋಟೆಲ್‌ನ ರಿಸೆಪ್ಟನ್‌ನಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಕೊಲೆ ಮಾಡಿದ ಬಳಿಕ ಆರೋಪಿಗಳಿಬ್ಬರು ಹೋಟೆಲ್‌ನಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಲಾಬೂರಾಮ್ ಅವರು ಭೇಟಿ ಪರಿಶೀಲನೆ ನಡೆಸಿದ್ದು, ಕಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರು ಕಾರ್ಯಾಚರಣೆ ಪ್ರಾರಂಭ ಮಾಡಿದ್ದಾರೆ.
ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದ ಚಂದ್ರಶೇಖರ್ ಹಲವು ಪುಸ್ತಕಗಳನ್ನೂ ಬರೆದಿದ್ದರು. ಸರಳ ವಾಸ್ತು ಹೆಸರಿನಲ್ಲಿಯೇ ಟಿವಿ ಕಾರ್ಯಕ್ರಮ ನಡೆಸುವ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿದ್ದರು.
ಸರಳ ಜೀವನ, ಸರಳ ವಾಸ್ತು, ಸರಳ ಅಕಾಡೆಮಿ, ಮನೆಗಾಗಿ ವಾಸ್ತು, ವಾಸ್ತು ಪರಿಹಾರದ ಮೂಲಕ ಅವರು ಕರ್ನಾಟಕದ ಮನೆಮಾತಾಗಿದ್ದರು. ಈವರೆಗೂ 2 ಸಾವಿರಕ್ಕೂ ಅಧಿಕ ಸೆಮಿನಾರ್‌ಗಳಲ್ಲಿ ಮಾತನಾಡಿರುವ ಚಂದ್ರಶೇಖರ್, ಈವರೆಗೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 16 ಪ್ರಶಸ್ತಿಗಳನ್ನು ಸಂಪಾದಿಸಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಜೊತೆಗೆ ಕಾಸ್ಮಿಕ್ ಆರ್ಕಿಟೆಕ್ಚರ್ ನಲ್ಲಿ ಡಾಕ್ಟರೇಟ್ ಪದವಿಯನ್ನೂ ಅವರು ಸಂಪಾದಿಸಿದ್ದರು.
























