ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಹರ್ಷ ಸಹೋದರಿಯ ಅಹವಾಲನ್ನು ಸ್ವೀಕರಿಸಲು ಸಮಯ ನೀಡಿಲ್ಲ ಎಂಬ ಆರೋಪ ನಿರಾಧಾರವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ಕೊಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಹರ್ಷ ಸಹೋದರಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಭೇಟಿ ಆಗಿದ್ದರು. ಈ ವೇಳೆ ಹರ್ಷ ಸಹೋದರಿಗೆ ಅಹವಾಲು ಸಲ್ಲಿಸಲು ಸಮಯ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆಗಳು ನಡೆದಿದ್ದವು.
ಈ ಹಿನ್ನಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತರಾದ ದಿವಂಗತ ಹರ್ಷ ಅವರ ಸಹೋದರಿಯ ಅಹವಾಲನ್ನು ಸ್ವೀಕರಿಸಲು ಸಮಯ ನೀಡಿಲ್ಲ ಎಂಬ ಆರೋಪ ನಿರಾಧಾರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೈಲಿನಲ್ಲಿರುವ ಹರ್ಷ ಹತ್ಯೆ ಆರೋಪಿಗಳು ಬೆಂಗಳೂರಿನ ಕಾರಾಗೃಹದಲ್ಲಿ ವಿಲಾಸಿ ಆತಿಥ್ಯ ಪಡೆಯುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಈಗಾಗಲೇ ಕಾರಾಗೃಹದ ಅಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಹರ್ಷನನ್ನು ಕಳೆದುಕೊಂಡ ಕುಟುಂಬದವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು, ಈಗಾಗಲೇ ಹರ್ಷ ಅವರ ಸಹೋದರಿಗೂ ಭೇಟಿಯಾದ ಸಂದರ್ಭದಲ್ಲಿ ತಿಳಿಸಿದ್ದೇನೆ. ಕಾರಾಗೃಹದ ಸಿಬ್ಬಂದಿಗಳ ವಿರುದ್ಧ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆಯೂ ಅವರಿಗೆ ತಿಳಿಸಲು ಪ್ರಯತ್ನಿಸಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಆದರೆ ನನ್ನ ವಿರುದ್ಧವೇ ಸತ್ಯಕ್ಕೆ ದೂರವಾದ ಆರೋಪ ನಡೆಸುತ್ತಿರುವುದು ದುರದೃಷ್ಟಕರ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.


























