ಬಂಟ್ವಾಳ: ಮಸೀದಿಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಮಸೀದಿಯ ಧರ್ಮಗುರುಗಳು ಹಲ್ಲೆ ನಡೆಸಿರುವ ಘಟನೆ ಫರಂಗಿಪೇಟೆಯಲ್ಲಿ ಸೋಮವಾರ ತಡರಾತ್ರಿ ನಡೆದಿದ್ದು ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಲ್ಲೆಗೊಳಗಾದವರನ್ನು ಪರಂಗಿಪೇಟೆ ಅಮ್ಮೆಮಾರ್ ರಸ್ತೆಯಲ್ಲಿರುವ ಬಿರ್ರುಲ್ ವಾಲಿದೈನ್ ಮಸೀದಿಯ ಧರ್ಮಗುರು, ಕುಂದಾಪುರ ನಿವಾಸಿಮುಸ್ತಾಕ್ ಎಂದು ಗುರುತಿಸಲಾಗಿದೆ. ಇವರು ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವ ಸಂದರ್ಭ ಕಾಲಿಗೆ ಗಾಯಗಳಾಗಿದ್ದು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ ಮಸೀದಿಗೆ ನುಗ್ಗಿದ ಮೂರು ಮಂದಿಯ ತಂಡ ಎರಡನೇ ಮಹಡಿಯಲ್ಲಿ ಮಲಗಿದ್ದ ಧರ್ಮಗುರುಗಳ ಮುಸ್ತಾಕ್ ಅವರ ಕತ್ತು ಹಿಚುಕಿ ಹಲ್ಲೆ ನಡೆಸಿದೆ. ಈ ವೇಳೆ ಮುಸ್ತಾಕ್ ಅವರು ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡು ಕೆಳ ಅಂತಸ್ತಿನಲ್ಲಿ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಸೀದಿಯ ಸಿ.ಸಿ ಕ್ಯಾಮರಾದಲ್ಲಿ ದುಷ್ಕರ್ಮಿಗಳು ನುಗ್ಗಿರುವ ದೃಶ್ಯ ಸೆರೆಯಾಗಿದ್ದು ಆದರೆ ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದರು. ಘಟನೆಯ ಕುರಿತು ಮಸೀದಿ ಅಧ್ಯಕ್ಷ ಸೈಯದ್ ಬಾವಾ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.