ಪುತ್ತೂರು: ವಿದ್ಯುತ್ ತಂತಿಗೆ ತಾಗಿಕೊಂಡಿದ್ದ ಮರದ ಗೆಲ್ಲನ್ನು ಕಡಿಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮೆಸ್ಕಾಂ ಪವರ್ ಮ್ಯಾನ್ ಮೃತಪಟ್ಟ ಘಟನೆ ಒಳಮೊಗ್ರು ಗ್ರಾಮದ ಪರ್ಪುಂಜದಲ್ಲಿ ನಡೆದಿದೆ.
ಬಿಜಾಪುರ ಜಿಲ್ಲೆಯ ಬೂದಿಹಾಲ್ ತಾಲೂಕಿನ ಮುದ್ದೇಬಿಹಾಲ್ ನಿವಾಸಿ ಸುರೇಶ್ ಎಲಿಗಾರ್ ರವರ ಪುತ್ರ ಬಸವರಾಜ್ ಎಲಿಗಾರ್ (28) ಮೃತ ಪವರ್ ಮ್ಯಾನ್.

ಬಸವರಾಜ್ ಕುಂಬ್ರ ಮೆಸ್ಕಾಂನಲ್ಲಿ ಕಳೆದ ಆರು ವರುಷಗಳಿಂದ ಜೂನಿಯರ್ ಪವರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಜು.12 ರಂದು ಪರ್ಪುಂಜ ಅಡಿಕೆ ತೋಟದ ಬದಿಯಲ್ಲಿದ್ದ ವಿದ್ಯುತ್ ತಂತಿಯಿಂದ ಶಬ್ದ ಬರುತ್ತಿದೆ ಎಂದು ಸ್ಥಳೀಯರು ಮೆಸ್ಕಾಂಗೆ ಕರೆ ಮಾಡಿ ತಿಳಿಸಿದ್ದು, ಮಧ್ಯಾಹ್ನ ವೇಳೆ ಮೆಸ್ಕಾಂ ಪವರ್ ಮ್ಯಾನ್ಗಳಾದ ಚಂದ್ರ, ಬಸವರಾಜ್ ಮತ್ತಿತರರು ಪಿಕಪ್ ನಲ್ಲಿ ಬಂದಿದ್ದರು. ಮೆಸ್ಕಾಂ ಇಲಾಖೆಯಿಂದ ಪವರ್ಮ್ಯಾನ್ಗಳಿಗೆ ನೀಡಲಾಗಿದ್ದ ಗೆಲ್ಲು ಕಡಿಯುವ ಟ್ರೀ ಪ್ರೂನರ್ ದೋಂಟಿಯನ್ನು ತಂದಿದ್ದರು. ತೋಟದ ಬದಿಯಲ್ಲಿರುವ ಸಣ್ಣ ಹೊಳೆಯ ಬದಿಯಲ್ಲಿ ಹಾದು ಹೋಗುವ ಹೈ ಟೆನ್ಷನ್ ವಿದ್ಯುತ್ ತಂತಿಗೆ ತಾಗುತ್ತಿದ್ದ ಉಪ್ಪಳಿಗೆ ಮರದ ಗೆಲ್ಲು ತಂತಿಗಳಿಗೆ ತಾಗುತ್ತಿತ್ತು.

ಅರ್ಧ ವಿದ್ಯುತ್ ನಿರೋಧಕ ರಬ್ಬರ್ ಕವಚವನ್ನು ಹೊಂದಿರುವ ದೊಂಟಿಯ ಮೂಲಕ ಗೆಲ್ಲನ್ನು ಕಡಿಯುವ ವೇಳೆಗೆ ಆಕಸ್ಮಾತ್ ಆಗಿ ಬಸವರಾಜ್ ರವರು ಕಾಲು ಜಾರಿ ಬಿದ್ದ ಪರಿಣಾಮ ಗೆಲ್ಲು ಕಡಿಯುವ ಅಲ್ಯೂಮಿನಿಯಂ ದೊಂಟಿ ವಿದ್ಯುತ್ ತಂತಿಗೆ ತಾಗಿ ಬಸವರಾಜ್ ಗೆ ಶಾಕ್ ಹೊಡೆದಿದೆ ಪರಿಣಾಮ ಅವರು ನೀರಿಗೆ ಬಿದ್ದಿದ್ದಾರೆ.

ಕೂಡಲೇ ಅಲ್ಲಿದ್ದ ಪಿಕಪ್ ಚಾಲಕ ಮೋನಪ್ಪ, ಚಂದ್ರ ಹಾಗೂ ಇತರರು ಬಸವರಾಜ್ ರವರನ್ನು ಸಣ್ಣ ಹೊಳೆಯಿಂದ ಮೇಲಕ್ಕೆ ತಂದು ಮಲಗಿಸಿ ಆರೈಕೆ ಮಾಡಿದ್ದಾರೆ.
ವಿದ್ಯುತ್ ಶಾಕ್ ನ ಪರಿಣಾಮ ಬಸವರಾಜ್ ಅವರ ಕೈಗೆ ಸುಟ್ಟ ಗಾಯಗಳಾಗಿದ್ದು ತಕ್ಷಣವೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಬಳಿಕ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೇ ಅಲ್ಲಿ ತಲುಪುವ ವೇಳೆ ಬಸವರಾಜ್ ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವರಾಜ್ ರವರಿಗೆ ಮದುವೆಯಾಗಿ ಮೂರೇ ತಿಂಗಳು ಕಳೆದಿದ್ದು, ಪತ್ನಿ ಗರ್ಭಿಣಿಯಾಗಿದ್ದಳು ಎಂದು ತಿಳಿದು ಬಂದಿದೆ. ಮನೆಯಲ್ಲಿ ತೀರಾ ಬಡತನವಿದ್ದ ಕಾರಣ ಕಷ್ಟಪಟ್ಟು ಮೆಸ್ಕಾಂ ಇಲಾಖೆಯಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದರು. ಬಸವರಾಜ್ ರವರ ಹಠಾತ್ ಮರಣದಿಂದಾಗಿ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.
ಮನೆಯಲ್ಲಿ ಕರೆಂಟ್(ವಿದ್ಯುತ್) ಹೋದ ತಕ್ಷಣ ಮೆಸ್ಕಾಂ ನವರನ್ನು ತೆಗಳುವ ಬದಲು ಅವರು ತಮ್ಮ ಕುಟುಂಬವನ್ನು ತೊರೆದು ಬಂದು ನಮಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಸಾರ್ವಜನಿಕರು ಅರಿಯಬೇಕಿದೆ.


























