ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನದಮೇಲೆ ನಿರ್ಮಾಣವಾಗಿರುವ ರಾಷ್ಟ್ರೀಯ ಲಾಂಛನವನ್ನ ಸೋಮವಾರ ಲೋಕಾರ್ಪಣೆ ಮಾಡಿದ್ದಾರೆ. ‘ರಾಷ್ಟ್ರ ಲಾಂಛನ’ದ ಸುತ್ತ ವಿವಾದ ಹೊತ್ತಿಕೊಂಡಿದ್ದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಕೆಸರೆರಚಾಟ ಶುರುವಾಗಿದೆ.

ಏನಿದು ವಿವಾದ..??
ರಾಷ್ಟ್ರೀಯ ಲಾಂಛನವನ್ನು ಮಾರ್ಪಡಿಸುವ ಮೂಲಕ ಅವಮಾನಿಸಲಾಗಿದೆ. ಮತ್ತು ಕಾರ್ಯಾಂಗದ ಮುಖ್ಯಸ್ಥರಾಗಿರುವ ಪ್ರಧಾನಿ ಮೋದಿ ಈ ಲಾಂಛನವನ್ನು ಅನಾವರಣ ಮಾಡಿದ್ದು ಏಕೆ ಎಂದು ಪಕ್ಷಗಳು ಪ್ರಶ್ನೆಯನ್ನ ಎತ್ತಿವೆ. ಇನ್ನು ಈ ಶಿಲ್ಪವನ್ನು ವಿನ್ಯಾಸಗೊಳಿಸಿದ ಶಿಲ್ಪಿಗಳು, ಲಾಂಛನದ ಮಾನದಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದಿದ್ದಾರೆ.
ವಿವಾದ ಹುಟ್ಟುಹಾಕಿದ ಲಾಲೂ ಟ್ವಿಟ್..!
ಮೂಲ ಲಾಂಛನವು ಸೌಮ್ಯ ಭಾವನೆಗಳನ್ನು ಹೊಂದಿತ್ತು. ಆದರೆ ನೂತನ ಶಿಲ್ಪದಲ್ಲಿ ಸಿಂಹಗಳನ್ನ ನರಭಕ್ಷಕ ಪ್ರವೃತ್ತಿಯಲ್ಲಿ ಬಿಂಬಿಸಲಾಗಿದೆ. ಅಮೃತ ಕಾಲದಲ್ಲಿ ನಿರ್ಮಿಸಿದ ಜನರು ದೇಶದಲ್ಲಿರುವ ಎಲ್ಲವನ್ನೂ ತಿಂದು ತೇಗುವ ನರಭಕ್ಷಕರ ಪ್ರವೃತ್ತಿಯನ್ನು ತೋರಿಸಿದ್ದಾರೆ ಎಂದು ಆರ್‌ಜೆಡಿ ಟ್ವಿಟ್ ಮಾಡಿದೆ.
ತುಪ್ಪ ಸುರಿದ ಓವೈಸಿ..!
ಸರ್ಕಾರದ ಮುಖ್ಯಸ್ಥರಾಗಿ ಮೋದಿ, ಹೊಸ ಸಂಸತ್ ಕಟ್ಟಡದ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣ ಮಾಡಬಾರದಿತ್ತು. ಪ್ರಧಾನಿಯವರು ಎಲ್ಲ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಓವೈಸಿ ಆರೋಪಿಸಿದ್ದಾರೆ. ಅದೇ ರೀತಿ ತೃಣಮೂಲ ಕಾಂಗ್ರೆಸ್ ಕೂಡ ಗಂಭೀರ ಆರೋಪ ಮಾಡಿದೆ.
ಸರ್ಕಾರ ಕೊಟ್ಟ ಸಮರ್ಥನೆ ಏನು..?
ಹೊಸ ಸಂಸತ್ತಿಗಾಗಿ ನಿರ್ಮಿಸಲಾದ ಅಶೋಕ ಸ್ತಂಭವು ಮೂಲ ಸಾರನಾಥ ಸ್ತಂಭದಂತೆಯೇ ಇದೆ. ಇವೆರಡರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಶಾಂತ ಮತ್ತು ಕೋಪದ ಸಂದರ್ಭದಲ್ಲಿಯೂ ಕೂಡ ಹೋಲಿಕೆ ಮಾಡಿದಾಗ ವ್ಯತ್ಯಾಸವಿಲ್ಲ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸರಣಿ ಟ್ವಿಟ್‌ಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮೂಲ ರಾಷ್ಟ್ರ ಲಾಂಛನವು 1.6 ಮೀಟರ್ ಎತ್ತರವಿದೆ. ಸಂಸತ್ತಿನ ನೂತನ ಕಟ್ಟಡದ ಮೇಲೆ ಮೋದಿ ಅನಾವರಣಗೊಳಿಸಿದ ಲಾಂಛನವು 6.5 ಮೀಟರ್ ಎತ್ತರದಲ್ಲಿದೆ. ಹೊಸ ಲಾಂಛನವನ್ನ ಮೂಲ ರಾಷ್ಟ್ರ ಲಾಂಛನದ ಗಾತ್ರಕ್ಕೆ ಇಳಿಸಿದರೆ ಯಾವುದೇ ವ್ಯತ್ಯಾಸ
ಆಗುವುದಿಲ್ಲ ಎಂದು ನೂತನ ಅಶೋಕ ಸ್ತಂಬದ ಫೋಟೋ ಜೊತೆ ಟ್ವಿಟ್ ಮಾಡಿದ್ದಾರೆ.
Must read thread by union minister @HardeepSPuri ji https://t.co/mndIMGsWfP
— Impreet Singh Bakshi ਇਮਪ੍ਰੀਤ ਸਿੰਘ ਬਖ਼ਸ਼ੀ (@impreetsbakshi) July 12, 2022
ವಿನ್ಯಾಸಕಾರರಾದ ಸುನೀಲ್ ದಿಯೋರಾ-ರೋಮಿಯೆಲ್ ಮೋಸೆಸ್ ಸ್ಪಷ್ಟನೆ ನೀಡಿದ್ದು, ರಾಷ್ಟ್ರೀಯ ಲಾಂಛನದ ಸಿಂಹಗಳಲ್ಲಿ ಬದಲಾವಣೆ ಮಾಡಿಲ್ಲ, ಹಿಂದಿನಂತೆಯೇ ಇವೆ. ಸಣ್ಣ ವ್ಯತ್ಯಾಸಗಳು ಆಗಿರಬಹುದಷ್ಟೇ. ಇದು ಬೃಹತ್ ಆಕಾರದಲ್ಲಿದ್ದು, ಕೆಳಭಾಗದಿಂದ ನೋಡಿದಾಗ ಮಾತ್ರ ಅದು ಆಕ್ರಮಣಕಾರಿಯಾಗಿ ಕಾಣುತ್ತಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.



























