ಪುತ್ತೂರು: ಭಾರೀ ಮಳೆಗೆ ಮುಂಡೂರು ಗ್ರಾಮದ ಪಾಪೆತ್ತಡ್ಕ ನಿವಾಸಿ ಕೃಷ್ಣಪ್ಪ ನಾಯ್ಕ್ ಎಂಬವರ ಮನೆ ಕುಸಿಯುವ ಭೀತಿಯಲ್ಲಿದ್ದು, ವಿಷಯ ತಿಳಿದ ತಕ್ಷಣ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಸದಸ್ಯರು ಮತ್ತು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಅವರು, ತಹಶೀಲ್ದಾರ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸಂಬಂಧಪಟ್ಟ ಇಲಾಖೆಗೆ ಸೂಚಿಸಿ ಪರಿಶೀಲನೆ ನಡೆಸುವ ಭರವಸೆಯನ್ನು ತಹಶೀಲ್ದಾರ್ ನೀಡಿದ್ದಾರೆ.

ಭಾರೀ ಮಳೆಯಿಂದಾಗಿ ಮನೆಯ ಹಿಂಬದಿಯ ಗುಡ್ಡ ಜರಿದು ಬಿದ್ದಿದ್ದು, ಈ ಹಿನ್ನೆಲೆ ಮಳೆಯ ನೀರೆಲ್ಲಾ ಮನೆಯ ಒಳಗೆ ನುಗ್ಗುತ್ತಿದೆ. ಇದರ ಕಾರಣ ಪರಿಶಿಷ್ಟ ಪಂಗಡ ದ ಬಡ ಕುಟುಂಬಕ್ಕೆ ಮನೆಯಲ್ಲಿ ವಾಸಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಸದ್ಯ ಸ್ಥಳಕ್ಕೆ ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಎನ್.,ಸದಸ್ಯರಾದ ಬಾಲಕೃಷ್ಣ ಗೌಡ, ಅನಿಲ್ ಕಣ್ಣರ್ನೂಜಿ, ಅಶೋಕ್ ಕುಮಾರ್ ಪುತ್ತಿಲ, ಪುರಂದರ ಗೌಡ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಹರೀಶ್, ಜಗದೀಶ್, ಪ್ರಸಾದ್ ಬಿ.ಕೆ ಹಾಗೂ ಇನ್ನಿತರರು ಭೇಟಿ ನೀಡಿದ್ದಾರೆ.




























