ಕೊಡಗು: ಕಳೆದ ನಾಲ್ಕು ವರ್ಷಗಳ ಹಿಂದೆ ಭೂಕುಸಿತದಿಂದ ಹಾನಿ ಸಂಭವಿಸಿದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿಯ ರಾಮಕೊಲ್ಲಿ ಎಂಬ ಪ್ರದೇಶದಲ್ಲಿ ಭೂಮಿಯೊಳಗಿನಿಂದ ಭಾರೀ ಸದ್ದು ಕೇಳಿ ಬಂದು ಬಂಡೆಕಲ್ಲು, ಭಾರೀ ಗಾತ್ರದ ಮರಗಳೊಂದಿಗೆ ನೀರು ಕೊಚ್ಚಿಕೊಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಎಂಟು ಮನೆಯ ಸುಮಾರು 40ಕ್ಕೂ ಹೆಚ್ಚು ಮಂದಿಯನ್ನು ಸ್ಥಳೀಯ ಕಾಳಜಿ ಕೇಂದ್ರಕ್ಕೆ ಕೊಡಗು ಜಿಲ್ಲಾಡಳಿತ ಸ್ಥಳಾಂತರಗೊಳಿಸಿದ ಘಟನೆ ನಡೆದಿದೆ.

ಜು.19 ರಂದು ರಾತ್ರಿ ಸುಮಾರಿಗೆ ಭೂಮಿಯೊಳಗಿನಿಂದ ಭಾರೀ ಸದ್ದು ಕೇಳಿದ ಮರುಕ್ಷಣವೇ ಗುಡ್ಡ ಕುಸಿದು ಮೇಲಿನಿಂದ ಬಂಡೆಕಲ್ಲು, ಭಾರೀ ಗಾತ್ರದ ಮರಗಳೊಂದಿಗೆ ಮಣ್ಣು ಮಿಶ್ರಿತ ನೀರು ಕೊಚ್ಚಿಕೊಂಡು ಬಂದು ಕೆಳಭಾಗದಲ್ಲಿದ್ದ ರಾಮಕೊಲ್ಲಿ ಸೇತುವೆಯನ್ನು ಕೊಚ್ಚಿಕೊಂಡು ಹೋಯಿತೆನ್ನಲಾಗಿದೆ.
ಸೇತುವೆಯ ಕೆಳಭಾಗದಲ್ಲಿ ಭಾರೀ ಗಾತ್ರದ ಮರದ ದಿಮ್ಮಿಗಳು ನಿಂತಿದ್ದು, ಭೋರ್ಗರೆಯುವ ಶಬ್ದದೊಂದಿಗೆ ಕೆಸರು ಮಿಶ್ರಿತ ನೀರು ಗುಡ್ಡದಿಂದ ಹರಿದುಬರುತ್ತಿದ್ದು, ಸ್ಥಳೀಯ ಜನರನ್ನು ಆತಂಕಗೊಳಿಸಿದೆ.

ಜು.19 ರಂದು ಗ್ರಾಮದ ಸ್ಥಳೀಯ ಹಲವಾರು ಯುವಕರು ಸೇರಿಕೊಂಡು ತಾತ್ಕಾಲಿಕಾಗಿ ಮರದ ಸೇತುವೆ ನಿರ್ಮಾಣ ಮಾಡಿದ್ದು, ಕೊಡಗು ಜಿಲ್ಲಾಡಳಿತದ ವತಿಯಿಂದ ಸ್ಥಳೀಯ ಎಂಟು ಮನೆಯ
ಸುಮಾರು 40ಕ್ಕೂ ಅಧಿಕ ಮಂದಿಯನ್ನು ಸ್ಥಳೀಯ ಕಾಳಜಿ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ಭೂಕುಸಿತಗೊಂಡ ಸ್ಥಳಕ್ಕೆ ವಿರಾಜಪೇಟೆ ಶಾಸಕ ಕೆ.ಜಿ. ಭೋಪಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಕೊಡಗು ಜಿಲ್ಲಾಧಿಕಾರಿ ಡಾ. ಸತೀಶ್, ಮಡಿಕೇರಿ ತಹಶಿಲ್ದಾರ್, ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




























