ಅಮಾನತುಗೊಳಗಾದ ಬಿಜೆಪಿಯ ರಾಷ್ಟ್ರೀಯ ಮಾಜಿ ವಕ್ತಾರೆ ನುಪೂರ್ ಶರ್ಮಾರನ್ನ ಕೊಲೆ ಮಾಡಲು ಪಾಕಿಸ್ತಾನದಿಂದ ಭಾರತದ ಗಡಿ ಪ್ರವೇಶ ಮಾಡಿ ಬಂದಿದ್ದ ಪಾಕಿಸ್ತಾನಿಯನ್ನ ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಬಂಧಿತ ಪಾಕಿಸ್ತಾನಿ ವ್ಯಕ್ತಿಯನ್ನ ಐಬಿ ಮತ್ತು ಇತರೆ ತನಿಖಾ ಸಂಸ್ಥೆಗಳು ತಮ್ಮ ಸುಪರ್ದಿಗೆ ತೆಗೆದುಕೊಂಡು ತನಿಖೆಯನ್ನ ಆರಂಭಿಸಿವೆ.
ಜುಲೈ 16 ರಂದು ಹಿಂದುಮಲ್ಯೂಟ್ ಬಾಡ್ರ್ಔಟ್ ಪೋಸ್ಟ್‌ನಲ್ಲಿ ರಾತ್ರಿ 11 ಗಂಟೆಗೆ ಪಾಕಿಸ್ತಾನದ ವ್ಯಕ್ತಿಯನ್ನ ಬಂಧಿಸಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿ ಒಬ್ಬರು ಮಾಹಿತಿ ನೀಡಿದ್ದರು. ರಾತ್ರಿ ಯೋಧರು ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಸ್ಪದವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಬಂಧಿಸಿದ್ದರು.
ಬ್ಯಾಗ್ ಹಿಡಿದು ನಿಂತಿದ್ದ ವ್ಯಕ್ತಿಯನ್ನ ಅರೆಸ್ಟ್ ಮಾಡಿ ತಪಾಸಣೆಗೆ ಒಳಪಡಿಸಲಾಗಿತ್ತು. 11 ಇಂಚಿನ ಉದ್ದದ ಚೂರಿ, ಧಾರ್ಮಿಕ ಪುಸ್ತಕ, ಬಟ್ಟೆಗಳು, ಆಹಾರ ಮತ್ತು ಮಣ್ಣು ಆತನ ಬ್ಯಾಗಿನಲ್ಲಿತ್ತು. ಅವುಗಳೆಲ್ಲವನ್ನೂ ವಶಕ್ಕೆ ಪಡೆದುಕೊಂಡಿದ್ದೇವೆ. ನಾನು ರಿಜ್ವಾನ್ ಅರ್ಶಫ್, ಪಾಕಿಸ್ತಾನದ ಪಂಜಾಬ್‌ನ ಮಂಡಿ ಬಹುದ್ದೀನ್ ಸಿಟಿಯಿಂದ ಬಂದಿದ್ದೇನೆ ಎಂದು ತಿಳಿಸಿದ್ದಾನೆ ಎಂದು ಅಧಿಕಾರಿಗಳು
ಮಾಹಿತಿ ನೀಡಿದ್ದರು.
ನಂತರ ಆತನನ್ನ ವಶಕ್ಕೆ ಪಡೆದು ತೀವ್ರ ತನಿಖೆಗೆ ಒಳಪಡಿಸಿದಾಗ ಆತ ಭಾರತದ ಗಡಿ ದಾಟಿದ ಅಸಲಿಯತ್ತು ತಿಳಿದಿದೆ. ಪ್ರವಾದಿ ಕುರಿತ ಹೇಳಿಕೆ ನೀಡಿದ್ದ ನುಪೂರ್ ಶರ್ಮಾರನ್ನ ಹತ್ಯೆ ಮಾಡಲು ಬಂದಿದ್ದ. ಅದರಂತೆ ಅಜೀರ್ ದರ್ಗಾಕ್ಕೆ ಮೊದಲು ಭೇಟಿ ನೀಡಿ ನಂತರ ಕೊಲೆ ಮಾಡಲು ನಿರ್ಧರಿಸಿದ್ದ ಅನ್ನೋದು ತನಿಖೆಯಿಂದ ತಿಳಿದು ಬಂದಿದೆ.
ಇದೀಗ ಆರೋಪಿಯನ್ನ ಕೋರ್ಟ್‌ಗೆ ಒಪ್ಪಿಸಿದ್ದೇವೆ. ನ್ಯಾಯಧೀಶರು 8 ದಿನಗಳ ಕಾಲ ಆತನನ್ನ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ನಾವು ಗುಪ್ತಚರ ಇಲಾಖೆಗೆ ಎಲ್ಲಾ ಮಾಹಿತಿಗಳನ್ನ ನೀಡಿದ್ದೇವೆ ಎಂದು ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.


























