ಬೆಳ್ತಂಗಡಿ: ನಾಡಿನ ಪುಣ್ಯದ ನೆಲೆವೀಡಾಗಿ ಚತುರ್ದಾನ ಪರಂಪರೆಯೊಂದಿಗೆ ಸಮಾಜಮುಖೀ ಯೋಜನೆಗಳಿಂದ ಐತಿಹಾಸಿಕ ಗೌರವ ಗಳಿಗೆ ಸಾಕ್ಷಿಯಾಗಿರುವ ಧರ್ಮಸ್ಥಳ ಕ್ಷೇತ್ರವಿಂದು ಮಗದೊಂದು ಇತಿಹಾಸ ಬರೆಯುತ್ತಿದೆ.
ಕ್ಷೇತ್ರದ ಧರ್ಮಾಧಿಕಾರಿಯವರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ರಾಜ್ಯ ಸಭೆಗೆ ಪ್ರವೇಶಿಸುವ ಮೂಲಕ ರಾಜಧರ್ಮ ಪರಿಪಾಲನೆಯ ಮತ್ತೊಂದು ಅಧ್ಯಾಯ ಬರೆಯಲಿದ್ದಾರೆ.

ಜನಸಾಮಾನ್ಯರ ಏಳಿಗೆಗಾಗಿ ಹಲವು ಸೇವೆಗಳನ್ನು ಸಲ್ಲಿಸಿರುವ ಧರ್ಮಾಧಿಕಾರಿಗಳ ಅಗ್ರಮಾನ್ಯ ಸೇವೆ ಯನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಸಭೆಗೆ ನಾಮ ನಿರ್ದೇಶನಗೊಳಿಸಿದ ಕ್ಷಣದಿಂದ ನಾಡಿನಾದ್ಯಂತ ಅಭಿನಂದನೆಯ ಮಹಾಪೂರವೆ ಹರಿದುಬಂದಿತ್ತು. ಇದೀಗ ಮತ್ತೊಂದು ಐತಿಹಾಸಿಕ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.
ಜು. 21 (ಇಂದು) ದೆಹಲಿಯ ಸಂಸತ್ ಭವನದಲ್ಲಿ ಬೆಳಗ್ಗೆ 10.30ಕ್ಕೆ ಡಾ. ಡಿ. ಹೆಗ್ಗಡೆಯವರು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಡಾ. ಹೆಗ್ಗಡೆಯವರು ಬುಧವಾರ ರಾತ್ರಿ 8.30ಕ್ಕೆ ದೆಹಲಿ ವಿಮಾನ ನಿಲ್ದಾಣ ತಲುಪಿದ್ದು, ಬಳಿಕ ತನ್ನ ಆಪ್ತ ಸ್ನೇಹಿತರೋರ್ವರ ನಿವಾಸ (ವಸಂತ್ ವಿಹಾರ್)ದಲ್ಲಿ ತಂಗಿದ್ದರು.

ಪ್ರಮಾಣವಚನ ಸಂದರ್ಭದಲ್ಲಿ ಡಾ.ಹೆಗ್ಗಡೆ ಕುಟುಂಬ ವರ್ಗದಿಂದ ಸಹೋದರ ಡಿ. ಸುರೇಂದ್ರ ಕುಮಾರ್, ಶ್ರೇಯಸ್ ಕುಮಾರ್, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಧರ್ಮಸ್ಥಳ ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ಧನ, ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಜೊತೆಗಿದ್ದರು.


























