ಮಂಗಳೂರು: ನಗರದ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಚುಂಬನದ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, 8 ಮಂದಿಯ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್, ಟ್ರುತ್ ಆಂಡ್ ಡೇರ್ ಗೇಮ್ ಆಟದ ಸಂದರ್ಭದಲ್ಲಿ ಚುಂಬನ ನಡೆಸಲಾಗಿದೆ. ವಶಕ್ಕೆ ಪಡೆದ ವಿದ್ಯಾರ್ಥಿಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೊಠಡಿಯಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿಗಳು ಗೇಮ್ಸ್ ಹೆಸರಲ್ಲಿ ವಿದ್ಯಾರ್ಥಿಗಳನ್ನು ಕೊಠಡಿಗೆ ಕರೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ವಿದ್ಯಾರ್ಥಿಗಳು ಚುಂಬನ ಮಾಡಿರುವ ವೀಡಿಯೋ ವೈರಲ್ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಇಂತಹ ಹಲವು ವೀಡಿಯೋಗಳಿವೆ ಎನ್ನುವ ಅನುಮಾನವನ್ನು ಪೊಲೀಸ್ ಕಮಿಷನರ್ ವ್ಯಕ್ತಪಡಿಸಿದ್ದಾರೆ. ಅಪಾರ್ಟ್ ಮೆಂಟ್ ನಲ್ಲಿ ಇನ್ನಷ್ಟು ಅಕ್ರಮ ಚಟುವಟಿಕೆ ನಡೆದಿದೆ ಎಂದು ಹೇಳಲಾಗಿದೆ. ಸದ್ಯ ವಶಕ್ಕೆ ಪಡೆದ ವಿದ್ಯಾರ್ಥಿಯಿಂದ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.
ಅಪಾರ್ಟ್ ಮೆಂಟ್ ನಲ್ಲಿ ವಿದ್ಯಾರ್ಥಿಗಳು ಮದ್ಯ ಸೇವನೆ ಸೇರಿದಂತೆ ಹಲವು ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ವ್ಯಕ್ತವಾಗಿದೆ. ಈ ಕಾರಣಕ್ಕಾಗಿ ಅಪಾರ್ಟ್ ಮೆಂಟ್ ಮಾಲಕರು ವಿದ್ಯಾರ್ಥಿಗಳನ್ನು ಪ್ರವೇಶ ನಿರಾಕರಿಸಿದ್ದರು.
ವಿದ್ಯಾರ್ಥಿಗಳ ಪೈಕಿ ಕೆಲವರು ಮಂಗಳೂರಿನವರಾಗಿದ್ದು, ಇನ್ನು ಕೆಲವರು, ಹೊರ ಜಿಲ್ಲೆಯವರಾಗಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.



























