ವಿಟ್ಲ: ಬೆಳ್ಳಂಬೆಳಗ್ಗೆ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂದೂ ಸಂಘಟನೆ ಕಾರ್ಯಕರ್ತರು ತಡೆದು ನಿಲ್ಲಿಸಿದ ಘಟನೆಗೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಂಜರಕೋಡಿ ಕೊಳ್ನಾಡು ನಿವಾಸಿ ಬಶೀರ್(28) ಹಾಗೂ ಪಂಜರಕೋಡಿ ಕೊಳ್ನಾಡು ನಿವಾಸಿ ನೌಫಲ್(24) ಎಂದು ಗುರುತಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಇವರಿಬ್ಬರು ಈ ಮೊದಲು ಅಕ್ರಮ ಗೋ ಸಾಗಾಟದಲ್ಲಿ ಭಾಗಿಗಳಾಗಿದ್ದು, ಈ ಹಿಂದೆ ಬೆಳ್ತಂಗಡಿ, ಸುಳ್ಯ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ಕೂಡಾ ದಾಖಲಾಗಿತ್ತು.
ಜು.22 ರಂದು ವಿಟ್ಲದ ಕೋಡಂದೂರು ಸಮೀಪ ಬೆಳ್ಳಂಬೆಳಗ್ಗೆ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂದೂ ಸಂಘಟನೆ ಕಾರ್ಯಕರ್ತರು ತಡೆದು ನಿಲ್ಲಿಸಿದ್ದು, ವಾಹನ ತಡೆಯುತ್ತಿದ್ದಂತೆ ಆರೋಪಿಗಳು ಕಾರ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು.
ಬಳಿಕ ಕಾರಿನ ಗಾಜನ್ನು ಒಡೆದು ಶೋಚನೀಯ ಸ್ಥಿತಿಯಲ್ಲಿ ಇದ್ದ ದನಗಳನ್ನು ಸಂಘಟನೆಯ ಕಾರ್ಯಕರ್ತರು ರಕ್ಷಿಸಿದ್ದು, ಸ್ಥಳಕ್ಕೆ ವಿಟ್ಲ ಠಾಣೆಯ ಪೊಲೀಸರು ಭೇಟಿ ನೀಡಿ ಕಾರನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.