ಮಂಗಳೂರು: ಬಜರಂಗದಳದ ಕಾರ್ಯಕರ್ತರು ಜು.25 ರಂದು ರಾತ್ರಿ ನಗರದ ರಿ-ಸೈಕಲ್ ದಿ ಲಾಂಜ್ ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಘಟನೆ ನಡೆದಿದೆ.
ಕಾರ್ಯಕರ್ತರು ಪಾರ್ಟಿ ಮಾಡುವುದನ್ನು ನಿಲ್ಲಿಸುವಂತೆ ವಿದ್ಯಾರ್ಥಿಗಳನ್ನು ಕೇಳಿದರು ಮತ್ತು ಅವರನ್ನು ಪಬ್ ನಿಂದ ಹೊರಗೆ ಕಳುಹಿಸಿದರು ಎನ್ನಲಾಗುತ್ತಿದೆ.

ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಬಜರಂಗದಳದ
ಕಾರ್ಯಕರ್ತರನ್ನು ಚದುರಿಸಿದ್ದು, ನಂತರ ಕಾಲೇಜು ವಿದ್ಯಾರ್ಥಿಗಳು ಪಾರ್ಟಿಯನ್ನು ಮಧ್ಯದಲ್ಲಿ ನಿಲ್ಲಿಸಿದರು ಎಂದು ವರದಿಯಾಗಿದೆ.
ಹುಡುಗರು ಮತ್ತು ಹುಡುಗಿಯರು ಇಬ್ಬರನ್ನೂ ಒಳಗೊಂಡ
ನಗರದ ಪ್ರತಿಷ್ಠಿತ ಸಂಸ್ಥೆಯ ಪದವಿಪೂರ್ವ ವಿದ್ಯಾರ್ಥಿಗಳು
ಕುಡಿದು ಮೋಜು ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು
ಆರೋಪಿಸಿದ್ದಾರೆ. ಇದಲ್ಲದೆ, ವಿದಾಯದ ಪಾರ್ಟಿಯ
ಹೆಸರಿನಲ್ಲಿ ಅವರು ಅಸಭ್ಯವಾಗಿ, ತುಂಡು ಉಡುಗೆ ತೊಟ್ಟು ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ 13 ವರ್ಷಗಳ ಹಿಂದೆ ಪಬ್ ನಲ್ಲಿ ಇದೆ ಮಾದರಿಯ ದಾಳಿ ನಡೆದಿತ್ತು. ಕೆಲವು ದಿನಗಳ ಹಿಂದೆ, ನಗರದ ಕಾಲೇಜೊಂದರ ವಿದ್ಯಾರ್ಥಿಗಳು ತಮ್ಮ ಲಿಪ್-ಲಾಕ್ ವೀಡಿಯೊದೊಂದಿಗೆ ಸುದ್ದಿ ಮಾಡಿದ್ದು, ಇದೀಗ ಪಬ್ ವಿಷಯದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತೆ ಸುದ್ದಿಯಾಗಿದ್ದಾರೆ.