ಸುಳ್ಯಪದವು: ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಪ್ರತಿನಿತ್ಯ ಬಸ್ಸಿನ ಬಾಗಿಲಲ್ಲಿ ನಿಂತು, ನೇತಾಡಿಕೊಂಡು ಹೋಗುತ್ತಿರುವ ದೃಶ್ಯ ಸುಳ್ಯಪದವಿನಿಂದ ಪುತ್ತೂರಿಗೆ ಪ್ರಯಾಣಿಸುವ ಸರಕಾರಿ ಬಸ್ ನಲ್ಲಿ ಕಂಡು ಬಂದಿದೆ.

ವಿದ್ಯಾರ್ಥಿಗಳು ಬಸ್ಸಿನ ಬಾಗಿಲಲ್ಲಿ ನಿಂತು ಕೈ ಹಿಡಿದುಕೊಂಡು ನೇತಾಡುತ್ತಿದ್ದು, ರಸ್ತೆ ಬದಿಯಲ್ಲಿಟ್ಟಿರುವ ಬ್ಯಾರಿಕೇಡ್ ಗೆ ವಿದ್ಯಾರ್ಥಿಯೊಬ್ಬ ತಾಗಿ ಅಪಾಯ ಸಂಭವಿಸುವ ಘಟನೆ ಕೂಡ ನಡೆದಿದೆ. ಈ ರೀತಿಯ ಘಟನೆಗಳು ಇಲ್ಲಿನ ಪ್ರಯಾಣಿಕರು ಪ್ರತಿನಿತ್ಯ ಸಂಕಷ್ಟವಾಗಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ 8:00 ಗಂಟೆಗೆ ಖಾಸಗಿ ಬಸ್ಸೊಂದು ಪ್ರಯಾಣಿಸುತ್ತಿತ್ತು., ಈ ಬಸ್ ನಲ್ಲಿ ಕೆಲಸಕ್ಕೆ ತೆರಳುವವರು ಪ್ರಯಾಣಿಸುತ್ತಿದ್ರೇ, 8.15ಕ್ಕೆ ಬರುವ ಕೆಎಸ್ಆರ್ಟಿಸಿ ಬಸ್ ನಲ್ಲಿ ವಿದ್ಯಾರ್ಥಿಗಳು ಆರಾಮವಾಗಿ ಪ್ರಯಾಣಿಸುತ್ತಿದ್ದರು.

ಆದ್ರೆ ಇದೀಗ ಕೆಎಸ್ಆರ್ಟಿಸಿ ಬಸ್ ಪ್ರಯಾಣ ಸಮಯದಲ್ಲಿ ಬದಲಾವಣೆಯಾಗಿದ್ದು, ಖಾಸಗಿ ಬಸ್ ಬರುವ ಸಮಯಕ್ಕೆ ಕೆಎಸ್ಆರ್ಟಿಸಿ ಬಸ್ ಕೂಡ ಬರುತ್ತಿದ್ದು, ಎಲ್ಲಾ ಪ್ರಯಾಣಿಕರು ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಹೀಗಾಗಿ ಖಾಸಗಿ ಬಸ್ ನವರಿಗೆ ಬಾಡಿಗೆಯಾಗದ ಹಿನ್ನೆಲೆ ಓಡಾಟವನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ.

ಆದರೆ ಇದೀಗ ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಕರು ಪ್ರಾಣದ ಹಂಗು ತೊರೆದು, ಪ್ರಯಾಣಿಸುವಂತ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆ ಇಲ್ಲಿನ ಸಾರ್ವಜನಿಕರು ಕೆಎಸ್ಆರ್ಟಿಸಿ ಬಸ್ ಓಡಾಟವನ್ನು ಮೊದಲಿದ್ದ ಸಮಯಕ್ಕೆ ನಿಗದಿಪಡಿಸಬೇಕು. ಇದರಿಂದಾಗಿ ಖಾಸಗಿ ಬಸ್ ಕೂಡ ಓಡಾಡುವಂತೆ ಮಾಡಬೇಕು ಎಂದು ಕೆಎಸ್ಆರ್ಟಿಸಿ ಡಿಪ್ಪೋಗೆ ಮನವಿ ಸಲ್ಲಿಸಿದ್ದಾರೆ.


























