ಪುತ್ತೂರು: ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದು, ಬೆಳ್ಳಾರೆ ಪೇಟೆಯಲ್ಲಿ ತನ್ನ ಅಂಗಡಿ ಮುಚ್ಚುತ್ತಿದ್ದ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದಾರೆ. ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳಾರೆ ಗ್ರಾಮದ ಮಾಸ್ತಿಕಟ್ಟೆಯಲ್ಲಿರುವ ಪ್ರವೀಣ್ ರವರ ಅಕ್ಷಯ ಫ್ರೆಶ್ ಚಿಕನ್ ಸ್ಟಾಲ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮಧು ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಜು.26 ರಂದು ರಾತ್ರಿ ವ್ಯಾಪಾರ ಮುಗಿಸಿ ಅಂಗಡಿ ಬಾಗಿಲು ಹಾಕಿ ತನ್ನ ಮನೆಯ ಕಡೆಗೆ ಹೋಗಲು ಸ್ಕೂಟರ್ ನಲ್ಲಿ ಕುಳಿತು ಸಿದ್ಧತೆಯಲ್ಲಿದ್ದಾಗ ಅಲ್ಲಿದ್ದ ಮಧುಕುಮಾರ್ ಅಂಗಡಿಯ ಒಳಗೆ ರೈನ್ ಕೋರ್ಟ್ ತರಲೆಂದು ಹೋದ ಸಮಯ ಅಂಗಡಿಯ ಹೊರಗೆ ಜೋರಾಗಿ ಬೊಬ್ಬೆ ಕೇಳಿ ಹೊರಗಡೆ ಬಂದು ನೋಡುವಷ್ಟರಲ್ಲಿ ಪ್ರವೀಣ್ ನೆಟ್ಟಾರು ರವರು ಬೈಕ್ ನಿಂತಿದ್ದ ಸ್ಥಳದಿಂದ ಸುಮಾರು 50 ಅಡಿ ದೂರದಲ್ಲಿ ಕವಚಿ ಬಿದ್ದಿದ್ದು ಆಗ ಅಲ್ಲಿಂದ ಮೂರು ಜನ ಅಪರಿಚಿತ ವ್ಯಕ್ತಿಗಳು ಕೈಯಲ್ಲಿ ಹತ್ಯಾರುಗಳನ್ನು ಹಿಡಿದುಕೊಂಡು ಬೈಕ್ ನಲ್ಲಿ ಪುತ್ತೂರು ಕಡೆಗೆ ಪರಾರಿಯಾಗಿದ್ದು, ನೆಲದಲ್ಲಿ ಬಿದ್ದಿದ್ದ ಪ್ರವೀಣ್ ರವರನ್ನು ನೋಡಿದಾಗ ಅವರ ಕುತ್ತಿಗೆಯ ಮತ್ತು ತಲೆಯ ಭಾಗದಲ್ಲಿ ಬಾರಿ ಗಾಯವಾಗಿದ್ದು, ರಕ್ತಸ್ರಾವ ಆಗುತ್ತಿದ್ದು ಸ್ಥಳಕ್ಕೆ ಆಂಬ್ಯುಲೆನ್ಸ್ ಬರ ಹೇಳಿ ಗಾಯಾಳುವನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರವೀಣ್ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕೊಲೆ ಕೃತ್ಯವನ್ನು ಎಸಗಿದ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ 63/2022 ಕಾನೂನಿನ ಕಲಂ :302 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.


























