ಪುತ್ತೂರು: ಬೆಳ್ಳಾರೆಯಲ್ಲಿ ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ
ಪ್ರವೀಣ್ ನೆಟ್ಟಾರು (34) ರವರ ಮನೆಯವರಿಗೆ ವೈಯುಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂಪಾಯಿ ನೆರವು ನೀಡುವುದಾಗಿ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ
ಘೋಷಿಸಿದ್ದಾರೆ.
ಸುಳ್ಯ ತಾಲೂಕು ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷರೂ,
ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯೂ ಬಿಜೆಪಿ ಯುವಮೋರ್ಚಾದ ದ.ಕ. ಜಿಲ್ಲಾ ಕಾರ್ಯಕಾರಿಣಿಯ ಸದಸ್ಯರೂ ಆಗಿದ್ದ ಯುವ ಉದ್ಯಮಿ
ಪ್ರವೀಣ್ ನೆಟ್ಟಾರು ರವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯವಾಗಿದೆ.
ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆದು ಹಂತಕರನ್ನು
ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೊಳಪಡಿಸಬೇಕಿದೆ ಎಂದು
ಪ್ರತಿಕ್ರಿಯೆ ನೀಡಿರುವ ಕೋಡಿಂಬಾಡಿಯ ಶ್ರೀ ಮಠಂತಬೆಟ್ಟು
ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ
ಅಧ್ಯಕ್ಷರೂ, ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್
ಪ್ರವರ್ತಕರೂ ಆಗಿರುವ ಉದ್ಯಮಿ ಅಶೋಕ್ ಕುಮಾರ್
ರೈ ಯವರು ಪ್ರವೀಣ್ ನೆಟ್ಟಾರು ರವರ ಮನೆಯವರಿಗೆ ಸಾಂತ್ವನ
ಹೇಳುವುದರ ಜೊತೆಗೆ ಅವರಿಗೆ ನೆರವು ನೀಡುವುದು ನಮ್ಮೆಲ್ಲರ
ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಪ್ರವೀಣ್ ಅವರ
ಪತ್ನಿಗೆ ಒಂದು ಲಕ್ಷ ರೂಪಾಯಿ ನೆರವು ನೀಡುತ್ತೇನೆ. ಮುಂದೆ
ಅವರಿಗೆ ಬೇಕಾದ ನೆರವು ನೀಡುತ್ತೇನೆ ಎಂದು ತಿಳಿಸಿದ್ದಾರೆ.



























