ಮಂಗಳೂರು: ಸುರತ್ಕಲ್‌ನಲ್ಲಿ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಗಂಭೀರ ಪ್ರಕರಣದಲ್ಲಿ ಆರೋಪಿಗಳಾಗಿರುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸುರತ್ಕಲ್‌ನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯಿಸಿ, ಇಂದು ಫಾಝಿಲ್ ಅಂತ್ಯಕ್ರಿಯೆ ನಡೆದಿದೆ. ಘಟನಾ ಸ್ಥಳದಲ್ಲಿನ ಸಿಸಿಟಿವಿ ಫೂಟೇಜ್ ಎಲ್ಲಾ ಚೆಕ್ ಮಾಡುತ್ತೇವೆ. ಹಂತಕರು ಬಳಕೆ ಮಾಡಿದ ವಾಹನದ ನಂಬರ್ ಆಧರಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಮೇಲೆ ಜನ ಇಟ್ಟ ಭರವಸೆ ಈಡೇರಿಸುತ್ತೇವೆ. ಸೋಷಿಯಲ್ ಮೀಡಿಯಾ ಮೂಲಕ ಅಪಪ್ರಚಾರ ಮಾಡಬಾರದು. ತನಿಖೆ ಮಾಡಿದ ಬಳಿಕ ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎನ್ನುವುದು ಗೊತ್ತಾಗುತ್ತೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತದೆ. ಮಸೂದ್ ಮರ್ಡರ್ ಆದಾಗ 24 ಗಂಟೆಯಲ್ಲಿ ಆರೋಪಿಗಳ ಬಂಧಿಸಿದ್ದೇವೆ. ಪ್ರವೀಣ್ ಕೊಲೆ ಕೇಸ್‌ನಲ್ಲಿ ಇಬ್ಬರನ್ನು ಬಂಧಿಸಿದ್ದೇವೆ ಎಂದರು.
ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕಾದ ಕ್ರಮ ತೆಗೆದುಕೊಂಡಿದೆ. ಇದು ಬಹಳ ಸವಾಲಿನ ಕೆಲಸವಾಗಿರುವುದರಿಂದ ನಾವು ಎದುರಿಸುತ್ತೇವೆ. ಮಂಗಳೂರು ಭಾಗದಲ್ಲಿ ಸ್ಪೆಷಲ್ ಡ್ರೈವ್ ನಡೆಸುತ್ತೇವೆ. ಸಾರ್ವಜನಿಕರ ಭಯ ಕಡಿಮೆ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.



























