ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ಬೆನ್ನಟ್ಟಿದ ಪೊಲೀಸರಿಗೆ ಸ್ಫೋಟಕ ಸತ್ಯವೊಂದು ಬಯಲಾಗಿದೆ.
ಪೊಲೀಸರ ಒಂದು ಟೀಮ್ ಕರ್ನಾಟಕದಲ್ಲಿ, ಮತ್ತೊಂದು ಟೀಮ್ ಕೇರಳದಲ್ಲಿ, ಮತ್ತೊಂದು ಟೀಮ್ ಟೆಕ್ನಿಕಲ್ ಸಾಕ್ಷ್ಯ ಕಲೆ ಹಾಕ್ತಿದೆ. ಇನ್ನೂಂದು ತಂಡ ಆರೋಪಿಗಳಿಂದ ಸತ್ಯ ಹೊರಹಾಕಿಸುವ ಪ್ರಯತ್ನದಲ್ಲಿದೆ. ಸದ್ಯ ಈಗ ಪೊಲೀಸರ ತನಿಖೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪೂರ್ವನಿಯೋಜಿತ ಕೃತ್ಯ ಎನ್ನುವುದು ದೃಢಪಟ್ಟಿದೆ. ಹಾಗೂ ಹತ್ಯೆಗೆ ಯಾವ ರೀತಿ ಸಂಚು ರೂಪಿಸಲಾಗಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ಹತ್ಯೆಯಾಗಿತ್ತು. ಪ್ರವೀಣ್ ಹತ್ಯೆಗೂ ಮುನ್ನ ಹಂತಕರು ಸ್ಟ್ರೀಟ್ಲೈಟ್ ಆಫ್ ಮಾಡಿ ಬಳಿಕ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರವೀಣ್ ಹತ್ಯೆ ಕೇಸ್ನಲ್ಲಿ ಶಫೀಕ್, ಜಾಕೀರ್ ಪಾತ್ರವಿರುವುದು ದೃಢವಾಗಿರುವ ಹಿನ್ನೆಲೆ ಸರ್ಚ್ ವಾರಂಟ್ ಪಡೆದು ಶಫೀಕ್ ಮನೆಯಲ್ಲಿ ಪೊಲೀಸರು ಶೋಧಕ್ಕೆ ಮುಂದಾಗಿದ್ದಾರೆ.

ಬೆಳ್ಳಾರೆ ಮುಖ್ಯರಸ್ತೆಯಲ್ಲೇ ಶಫೀಕ್ ಮನೆ ಇದ್ದು ಬಾಡಿಗೆ ಮನೆ ಪಡೆದು ತಂದೆ ತಾಯಿ ಜೊತೆ ಆರೋಪಿ ವಾಸವಿದ್ದ. ಇದೇ ಮನೆಯಲ್ಲಿ ಕುಳಿತು ಪ್ರವೀಣ್ ಹತ್ಯೆಗೆ ಬಲೆ ಹೆಣೆಯಲಾಗಿತ್ತು ಎನ್ನಲಾಗುತ್ತಿದೆ. ಈ ಮನೆ ಬೆಳ್ಳಾರೆ ಠಾಣೆಯಿಂದ 300 ಮೀಟರ್ ದೂರದಲ್ಲೇ ಇದೆ. ಹಾಗೂ ಪ್ರವೀಣ್ ಅಂಗಡಿಯಿಂದ 500 ಮೀಟರ್ ದೂರದಲ್ಲಿದೆ. ಇದೇ ಮನೆಯಲ್ಲಿ ಕುಳಿತು ಪ್ರವೀಣ್ ಚಲನವಲನ ಗಮನಿಸಿ ಕೊಲೆಗೆ ಹಂತಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರವೀಣ್ ಹತ್ಯೆಗೂ ಮುನ್ನ ಸ್ಟ್ರೀಟ್ಲೈಟ್ ಆಫ್ ಮಾಡಲಾಗಿದೆ. ಕೊಲೆ ದಿನ ಆ ಏರಿಯಾದಲ್ಲಿ ಕರೆಂಟ್ ಇದ್ದರೂ ಪವರ್ ಕಟ್ ಆಗಿತ್ತು. ಪ್ರವೀಣ್ ಅಂಗಡಿಯ 500 ಮೀಟರ್ ಸುತ್ತಾ ಮುತ್ತಾ ಆರೋಪಿಗಳು ಪವರ್ ಕಟ್ ಮಾಡಿಸಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ನಂತರ ಪ್ರವೀಣ್ ಅಂಗಡಿ ಬಳಿ ತೆರಳಿ ಮರ್ಡರ್ ಮಾಡಿದ್ದಾರೆ. ಹಾಗಾಗಿ ಯಾವ ಸಿಸಿಟಿವಿ ಕ್ಯಾಮೆರಾದಲ್ಲೂ ಆರೋಪಿಗಳ ಚಹರೆ ಸಿಕ್ಕಿಲ್ಲ. ಕೊಲೆ ಬಳಿಕ ಕಾದು ಕುಳಿತಿದ್ದ ಶಫೀಕ್, ಜಾಕಿರ್, ಹಂತಕರನ್ನು ಕರೆದೊಯ್ದಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಮನೆ ಮಾಲೀಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಒಂದು ವರ್ಷದಿಂದ ಇದೇ ಮನೆಯಲ್ಲಿ ವಾಸವಿರೋದಾಗಿ ಮಾಹಿತಿ ಸಿಕ್ಕಿದೆ.


























