ಮಂಗಳೂರು: ಕರಾವಳಿಯಲ್ಲಿ ಸರಣಿ ಹತ್ಯೆಗಳ ಬಳಿಕ ಪರಿಸ್ಥಿತಿ ಇನ್ನು ಬೂದಿ ಮುಚ್ಚಿದ ಕೆಂಡದಂತಿರುವ ಕಾರಣ, ಈಗಾಗಲೇ ಜಾರಿಯಲ್ಲಿರುವ ನೈಟ್ ಕರ್ಫ್ಯೂ ಜೊತೆ ಜಿಲ್ಲಾಡಳಿತ ಇದೀಗ ಮಧ್ಯ ಮಾರಾಟ ನಿಷೇಧವನ್ನು ಆಗಸ್ಟ್ 5ರ ವರೆಗೆ ಮುಂದುವರೆಸಿದೆ.
ಬೆಳ್ಳಾರೆ ಪ್ರವೀಣ್ ಹಾಗೂ ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆ ಬಳಿಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಹಿಂದೆ ಆಗಸ್ಟ್ 3ರ ವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿತ್ತು.
ಇದೀಗ ಪರಿಸ್ಥಿತಿ ಇನ್ನೂ ತಿಳಿಯಾಗದ ಕಾರಣ ಮತ್ತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕೋರಿಕೆ ಮೇರೆಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಅವರು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧವನ್ನು ಆಗಸ್ಟ್ 5ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
 
	    	



























