ಈ ವರ್ಷ ಅತಿ ಹೆಚ್ಚು ಸೆನ್ಸೇಷನ್ ಸೃಷ್ಟಿ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಎಂದರೆ ತಪ್ಪಾಗಲ್ಲ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರದಲ್ಲಿ ಅನೇಕ ವಿಚಾರಗಳನ್ನು ಚರ್ಚೆ ಮಾಡಲಾಗಿದೆ. ಹಿಂದಿಯಲ್ಲಿ ತಯಾರಾದ ಈ ಸಿನಿಮಾ ನಂತರ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗಿತ್ತು. ಈಗ ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಈ ಸಿನಿಮಾ ಪ್ರಸಾರಕ್ಕೆ ಸಕಲ ಸಿದ್ಧತೆ ನಡೆದಿದೆ.
ಜೀ ಕನ್ನಡ ವಾಹಿನಿಯಲ್ಲಿ ಆಗಸ್ಟ್ 15ರಂದು ಸ್ವಾತಂತ್ರೋತ್ಸವದ ಪ್ರಯುಕ್ತ ಮಧ್ಯಾಹ್ನ 3 ಗಂಟೆಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಪ್ರಸಾರ ಆಗಲಿದೆ. ಚಿತ್ರಮಂದಿರದಲ್ಲಿ ಮತ್ತು ಒಟಿಟಿಯಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡವರಿಗೆ ಈಗ ಕಿರುತೆರೆಯಲ್ಲಿ ವೀಕ್ಷಿಸಲು ಅವಕಾಶ ಸಿಗುತ್ತಿದೆ.
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಯಾರಾಗಿದೆ. ಅನುಪಮ್ ಖೇರ್, ದರ್ಶನ್ ಕಮಾರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ, ಪುನೀತ್ ಇಸಾರ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ. ನೈಜ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ನಿರ್ಮಾಣವಾದ ಈ ಸಿನಿಮಾವನ್ನು ಅನೇಕ ರಾಜಕಾರಣಿಗಳು ನೋಡಿ ಮೆಚ್ಚಿಕೊಂಡಿದ್ದರು. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಮುಂತಾದವರು ಮೆಚ್ಚುಗೆ ಮಾತುಗಳನ್ನು ಆಡಿದ್ದರು.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ತಯಾರಾಗಿದ್ದು 15ರಿಂದ 20 ಕೋಟಿ ರೂಪಾಯಿ ಬಜೆಟ್ನಲ್ಲಿ. ಆದರೆ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 252 ಕೋಟಿ ರೂಪಾಯಿ ಎಂಬುದು ಅಚ್ಚರಿಯ ಸಂಗತಿ…