ಸುಳ್ಯ: ತಾಲೂಕಿನಲ್ಲಿ ಉಂಟಾಗಿರುವ ಭೀಕರ ಜಲ ಪ್ರವಾಹಕ್ಕೆ ಹರಿಹರದ ಉಪ್ಪುಕಳ ಎಂಬಲ್ಲಿ ಸೇತುವೆ ಕೊಚ್ಚಿ ಹೋಗಿದ್ದು, ಕೇವಲ ನಾಲ್ಕು ಗಂಟೆ ಅವಧಿಯಲ್ಲಿ ಕಿರು ಸೇತುವೆ ನಿರ್ಮಾಣ ಮಾಡುವ ಮೂಲಕ ಸುಳ್ಯ ಸೇವಾಭಾರತಿ ತಂಡ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಮೂರನೇ ಭಾರೀ ಕಾಲು ಸೇತುವೆ ಸಂಪರ್ಕ ಕಳೆದುಕೊಂಡಿದ್ದು, ಸುಮಾರು 12 ಮನೆಗಳು ಇದರಿಂದಾಗಿ ಸಂಪರ್ಕ ಕಳೆದುಕೊಂಡಿತ್ತು. ಸೇವಾಭಾರತಿ ಕಾರ್ಯಕರ್ತರು ಆ.5 ರಂದು ಭಾರೀ ಮಳೆಯಿದ್ದರೂ ಲೆಕ್ಕಿಸದೆ ತಡರಾತ್ರಿ ವರೆಗೂ ಕೆಲಸ ನಿರ್ವಹಿಸಿ ಕಿರು ಸೇತುವೆ ನಿರ್ಮಾಣ ಮಾಡುವ ಮೂಲಕ ಸಂಪರ್ಕ ಸಾಧಿಸಿದ್ದಾರೆ.

ಹರಿಹರ ಪಲ್ಲತಡ್ಕದ ಅಧ್ಯಕ್ಷ ಜಯಂತ ಬಾಳುಗೋಡು ರವರು ಉಪ್ಪುಕಳ, ಕೊನ್ನಡ್ಕ ಭಾಗಕ್ಕೆ ಫುಡ್ ಕಿಟ್ ತಲುಪಿಸಿದ್ದು, ಅಷ್ಟೇ ಅಲ್ಲದೇ ಸೇವಾ ಭಾರತಿ ಕಾರ್ಯಕರ್ತರ ಸೇವೆಗೆ ಸಾಥ್ ನೀಡಿದ್ದಾರೆ. ಹರಿಹರ ಪಲ್ಲತಡ್ಕದ ಅಧ್ಯಕ್ಷ ಜಯಂತ ಬಾಳುಗೋಡು ರವರ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸಕ್ಕೆ ಹಾಗೂ ಸೇವಾ ಭಾರತಿ ಕಾರ್ಯಕರ್ತರ ಸೇವಾ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.




























