ಮಂಗಳೂರು: ನಿಷೇಧಾಜ್ಞೆ, ನೈಟ್ ಕರ್ಫ್ಯೂ ವೇಳೆ ಕನ್ನಡಕ ಮಾರಾಟದ ಅಂಗಡಿ ತೆರೆದು ಅದನ್ನು ಮುಚ್ಚಲು ಹೇಳಿದ ಪೊಲೀಸ್ ಸಿಬ್ಬಂದಿಯ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೊರಡಿಸಿದ್ದರು. ಜೊತೆಗೆ ನೈಟ್ ಕರ್ಪ್ಯೂ ಹೇರಿದ್ದರು.
ಈ ಹಿನ್ನೆಲೆಯಲ್ಲಿ ಆ.4 ರಂದು ಸಂಜೆ ಉಳ್ಳಾಲ ಠಾಣಾ ಸಿಬ್ಬಂದಿ ರೌಂಡ್ಸ್ ಹೋಗುತ್ತಿದ್ದ ಸಂದರ್ಭ ಮಾಸ್ತಿಕಟ್ಟೆಯ ಬಳಿಗೆ ತಲುಪಿದಾಗ ಅಲ್ಲಿರುವ ಕನ್ನಡಕ ಮಾರಾಟದ ಅಂಗಡಿಯನ್ನು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.
ಈ ವೇಳೆ ಅದನ್ನು ಮುಚ್ಚುವಂತೆ ತಿಳಿಸಿದಾಗ ಅಲ್ಲಿನ ಸಿಬ್ಬಂದಿ ಉಡಾಫೆ ಮಾತನಾಡಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಜೊತೆಗೆ ಅಂಗಡಿ ಮಾಲಕ ಪೊಲೀಸ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ ಎಂಬ ದೂರಿನನ್ವಯ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























