ಕಳೆದ ಎರಡು ವರ್ಷಗಳಿಂದ ಗಣೇಶೋತ್ಸವಕ್ಕೆ ಕವಿದಿದ್ದ ಕೋವಿಡ್ ಕರಿಛಾಯೆ ಈ ಬಾರಿ ದೂರವಾಗಿದ್ದು, ಎಲ್ಲಾ ನಿರ್ಬಂಧ ತೆರವುಗೊಳಿಸಿ ಅದ್ದೂರಿಯ ಆಚರಣೆಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಹಿಂದಿನಂತೆಯೇ ಗಣೇಶನ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಈ ಬಾರಿ ಅವಕಾಶವಿದೆ ಎಂದರು.
ಪರಿಸರ ಸ್ನೇಹಿ ಮಣ್ಣಿನಿಂದ ತಯಾರಿಸಿದ ಗಣಪತಿ ವಿಗ್ರಹಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು, ಪರಿಸರ ಮಾಲಿನ್ಯಗೊಳಿಸುವ ಪ್ಲಾಸ್ಲರ್ ಆಫ್ ಪ್ಯಾರಿಸ್ ಇನ್ನಿತರ ವಸ್ತು ಬಳಸಿ ತಯಾರಿಸಿದ ವಿಗ್ರಹ ಕೂರಿಸುವಂತಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಹಬ್ಬದ ಸಂಭ್ರಮವನ್ನು ಹಳೆಯ ವೈಭವಕ್ಕೆ ಮರಳಿಸುವ ದೃಷ್ಟಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದರು.


























