ಶಿವಮೊಗ್ಗ: ನಗರದಲ್ಲಿ ಪ್ರೇಮ್ ಸಿಂಗ್ ಗೆ ಚಾಕು ಇರಿತ ಪ್ರಕರಣದ ಪ್ರಮುಖ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣದ ಪ್ರಮುಖ ಆರೋಪಿ ಮಾರ್ನಾಮಿಬೈಲ್ ನ ಜಬೀವುಲ್ಲಾ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ ಈ ವೇಳೆ ಶಿವಮೊಗ್ಗ ವಿನೋಬನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿರುವ ಮಂಜುನಾಥ್ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿರುವ ನಮೋ ಶಂಕರ ಲೇಔಟ್ ನಲ್ಲಿ ಘಟನೆ ನಡೆದಿದ್ದು, ಸದ್ಯ ಆರೋಪಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ದೊಡ್ಡಪೇಟೆ ಪೊಲೀಸರು ಈಗಾಗಲೇ ಶಿವಮೊಗ್ಗ ಜೆಸಿ ನಗರದ ನದೀಮ್ (25) ಹಾಗೂ ಬುದ್ಧ ನಗರದ ಅಬ್ದುಲ್ ರೆಹಮಾನ್ (25) ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತಿಬ್ಬರ ಬಂಧನಕ್ಕೆ ಪೊಲೀಸರಿಂದ ಕಾರ್ಯಾಚರಣೆ ಮುಂದುವರಿದಿದೆ.
ನಗರದಲ್ಲಿ ವಿ ಡಿ ಸಾವರ್ಕರ್ ಫ್ಲೆಕ್ಸ್ ವಿವಾದದಿಂದಾಗಿ ಬಿಗುವಿನ ವಾತಾವಣವಿದೆ. ಅಲ್ಲದೇ ಎರಡು ಕಡೆಗಳಲ್ಲಿ ಇಬ್ಬರಿಗೆ ಚಾಕುವಿನಿಂದ ಇರಿದ ಪರಿಣಾಮ ಮತ್ತಷ್ಟು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೀಗಾಗಿ ಇಂದು ಶಿವಮೊಗ್ಗ ಮತ್ತು ಭದ್ರಾವತಿ ನಗರದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

























