ಪುತ್ತೂರು: ಅಪಘಾತಗೊಂಡ ಅಪರಿಚಿತ ಕಾರೊಂದು ಪಾಸ್ಟಿಕ್ ಹೊದಿಕೆ ಮುಚ್ಚಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ರೋಟರಿಪುರ ಸಮೀಪ ನಡೆದಿದ್ದು, ಈ ಘಟನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಸಾರ್ವಜನಿಕರ ಆತಂಕಕ್ಕೆ ತೆರೆ ಎಳೆದಿದ್ದಾರೆ.

ಹುಂಡೈ ಸಂಸ್ಥೆಗೆ ಸೇರಿದ ಮಂಗಳೂರು ರಿಜಿಸ್ಟ್ರೇಷನ್ ನ (KA.19) ಕಾರೊಂದು ಅಪಘಾತಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೆಲ ಸಮಯಗಳಿಂದ ಈ ಕಾರು ಇಲ್ಲಿಯೇ ಟರ್ಪಾಲು ಹೊದಿಸಿ ಇದೆ ಯಾರೂ ತೆಗೆದುಕೊಂಡು ಹೋಗಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರಿನ ಮಾಲಕರನ್ನು ಸಂಪರ್ಕಿಸಿ ಸಾರ್ವಜನಿಕರ ಆತಂಕ ದೂರ ಮಾಡಿದ್ದಾರೆ.
ಬೆಳ್ಳಾರೆಯಲ್ಲಿ ಆರು ತಿಂಗಳ ಹಿಂದೆ ಮೋರಿಗೆ ಡಿಕ್ಕಿಯಾದ ಸವಣೂರಿನ ಮಿಥುನ್ ಎಂಬವರ ಮಾಲಕತ್ವದ ಹುಂಡೈ ಕಾರನ್ನು ಶೋರೂಮ್ ಒಂದರಲ್ಲಿ ದುರಸ್ಥಿಗೆ ಇಡಲಾಗಿತ್ತು. ಆದರೇ ಮಿಥುನ್ ರವರು ಕಾರನ್ನು ಬೆಳ್ತಂಗಡಿಯ ಜಯಂತ್ ಎಂಬವರಿಂದ ಖರೀದಿಸಿದಾಗ ಆರ್.ಸಿ. ಮಾಲಕತ್ವ ಮಾತ್ರ ಬದಲಾಗಿದ್ದು, ಕಾರಿನ ಇನ್ಶೂರೆನ್ಸ್ ಈ ಹಿಂದಿನ ಕಾರಿನ ಮಾಲಕ ಜಯಂತ್ ರವರ ಹೆಸರಿನಲ್ಲಿ ಇದ್ದ ಹಿನ್ನೆಲೆ ಕಾರಿಗೆ ಅಪಘಾತದ ವಿಮೆ ಕೊಡಲಾಗುವುದಿಲ್ಲ ಎಂದು ಇನ್ಶೂರೆನ್ಸ್ ಕಂಪೆನಿಯವರು ಮಾಹಿತಿ ನೀಡಿದ್ದು, ಶೋರೂಮ್‌ನಲ್ಲಿ ಇರಿಸಿದ್ದ ಕಾರಿಗೆ ದಿನವೊಂದಕ್ಕೆ 2,500 ರೂ. ಬಾಡಿಗೆ ನೀಡಬೇಕಾದ ಹಿನ್ನೆಲೆ ಮಿಥುನ್ ರವರು ಪರಿಚಯಸ್ಥರಾದ ರೋಟರಿಪುರ ನಿವಾಸಿ ರಾಮ ಎಂಬವರ ಮನೆಯ ಸಮೀಪ ನಿಲ್ಲಿಸಿದ್ದರು ಎಂದು ತಿಳಿದು ಬಂದಿದೆ.
ಇದೀಗ ಕಾರನ್ನು ತೆರವು ಗೊಳಿಸಲಾಗಿದ್ದು, ಸ್ಥಳೀಯರ ಆತಂಕಕ್ಕೆ ತೆರೆ ಎಳೆದಂತಾಗಿದೆ.

























