ಮಂಗಳೂರು: ನಗರದ ಕೆಎಂಎಫ್ ಡೈರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 138 ಜನರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಪುತ್ತೂರು ಬಲ್ನಾಡು ಕಾನ ಬಂಡಾರಿ ಕೆರೆ ನಿವಾಸಿ ರಮೇಶ್ ಪೂಜಾರಿ(41), ಮಾಣಿಲ ಗ್ರಾಮದ ಮಾಣಿಮೂಲೆ ದಿ. ಗೋವಿಂದ ನಾಯ್ಕ್ ಎಂಬವರ ಪುತ್ರಿ, ಪ್ರಸ್ತುತ ಪಡೀಲ್ ನಲ್ಲಿರುವ ಚಂದ್ರಾವತಿ (36) ಮತ್ತು ಬೆಂಗಳೂರಿನ ದೊಡ್ಡ ತೋಗೂರು ಎಲೆಕ್ಟ್ರಾನಿಕ್ ಸಿಟಿಯ ಸುರೇಂದ್ರ ರೆಡ್ಡಿ (35) ಎಂದು ಗುರುತಿಸಲಾಗಿದೆ.

ಈ ಮೂವರು ಬಂಧಿತರು ಪ್ರಮುಖ ಆರೋಪಿ ರಾಮ್ ಪ್ರಸಾದ್ ರಾವ್ ಪಿ ಅಲಿಯಾಸ್ ಹರೀಶ್ ಅಲಿಯಾಸ್ ಕೇಶವ ಅಲಿಯಾಸ್ ಶಶಿಧರ ಎಂಬಾತನೊಂದಿಗೆ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಕೈಜೋಡಿಸಿದವರಾಗಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎಂದು ತಿಳಿದು ಬಂದಿದೆ.


























