ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೂ ಶುಕ್ರವಾರ (ಆಗಸ್ಟ್ 26) ರಾಜೀನಾಮೆ ನೀಡಿದ್ದಾರೆ.
ಐದು ಪುಟಗಳ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ಪಕ್ಷವು ‘ಸುಧಾರಿಸಲು ಸಾಧ್ಯವಾಗದ ಸ್ಥಿತಿ ತಲುಪಿದೆ’ ಎಂದು ಬರೆದಿದ್ದಾರೆ. ಇತ್ತೀಚೆಗಷ್ಟೇ ಅವರು ಆರೋಗ್ಯದ ಕಾರಣ ಮುಂದಿಟ್ಟು ಜಮ್ಮು ಮತ್ತು ಕಾಶ್ಮೀರ ಘಟಕದ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಈ ಮೂಲಕ ಪಕ್ಷದ ಉನ್ನತ ನಾಯಕತ್ವದ ಕಾರ್ಯವೈಖರಿ ಬಗ್ಗೆ ತಮ್ಮ ಅಸಮಾಧಾನವನ್ನು ಮತ್ತೆ ಹೊರಹಾಕಿದ್ದರು. ಪಕ್ಷದ ನಾಯಕತ್ವ ಕಾರ್ಯನಿರ್ವಹಿಸುತ್ತಿರುವ ರೀತಿ ಬದಲಾಗಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದ ಜಿ-23 ಸಮಿತಿಯಲ್ಲಿ ಗುಲಾಂ ನಬಿ ಆಜಾದ್ ಸಹ ಇದ್ದರು. ಗುಲಾಂ ನಬಿ ಆಜಾದ್ ಅವರನ್ನು ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ನೇಮಕಾತಿ ಆದೇಶ ಹೊರಬಿದ್ದ ಕೆಲಹೊತ್ತಿನಲ್ಲಿಯೇ ಅವರು ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದರು. ಪಕ್ಷದ ಜಮ್ಮು ಕಾಶ್ಮೀರ ರಾಜಕೀಯ ವ್ಯವಹಾರ ಸಮಿತಿಗೂ ಆಜಾದ್ ರಾಜೀನಾಮೆ ನೀಡಿದ್ದರು.
ಈ ನೇಮಕಾತಿಯ ಬಗ್ಗೆ ಆಜಾದ್ ಅಸಮಾಧಾನ ಹೊಂದಿದ್ದರು. ಕಾಂಗ್ರೆಸ್ನ ರಾಷ್ಟ್ರೀಯ ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯರಾಗಿದ್ದ ಅವರು ರಾಜ್ಯಮಟ್ಟದ ಸಮಿತಿಗೆ ನೇಮಿಸಿದ್ದನ್ನು ಹಿಂಬಡ್ತಿ ಎಂದೇ ಪರಿಗಣಸಿದ್ದರು. ತಮ್ಮ ರಾಜೀನಾಮೆಗೆ ಆರೋಗ್ಯದ ಕಾರಣಗಳನ್ನು ಆಜಾದ್ ಮುಂದಿಟ್ಟಿದ್ದಾರೆ. ಆದರೆ ಅವರ ರಾಜೀನಾಮೆಯ ನಿಜವಾದ ಕಾರಣಗಳು ಬೇರೆಯೇ ಇವೆ ಎಂದು ರಾಜಕೀಯ ಮೂಲಗಳು ತಿಳಿಸಿದ್ದವು.


























