ಶಿಕ್ಷಣ ಇಲಾಖೆ, ಮಕ್ಕಳ ಬದುಕು ರೂಪಿಸಬೇಕಾದ ಇಲಾಖೆ. ದೇಶದ ಭವಿಷ್ಯ ಭದ್ರಗೊಳಿಸಬೇಕಾದ ಕ್ಷೇತ್ರ. ಆದ್ರೆ ಇಂಥಾ ಇಲಾಖೆ ವಿರುದ್ಧವೇ ಕಮಿಷನ್, ಲಂಚದ ಆರೋಪ ಕೇಳಿ ಬಂದಿದೆ.
ಶಾಲೆಗಳ ಮಾನ್ಯತೆ ನವೀಕರಣ ಮಾಡಬೇಕಾದ್ರೆ ಬಿಇಓಗಳಿಗೆ ಲಂಚ ಕೊಡಬೇಕು. ಇಡೀ ಇಲಾಖೆಯಲ್ಲೇ 50 ಪರ್ಸೆಂಟ್ ಕಮಿಷನ್ ಚಾಲ್ತಿಯಲ್ಲಿದೆ. ಕೈ ಇಟ್ಟಲ್ಲೆಲ್ಲಾ ಲಕ್ಷ ಲಕ್ಷ ಕಾಸು ಕೊಡಲೇಬೇಕು ಅಂತಾ ಖಾಸಗಿ ಶಾಲೆಗಳ ಒಕ್ಕೂಟ ಹೊಸ ಬಾಂಬ್ ಸಿಡಿಸಿದೆ. ಶಿಕ್ಷಣ ಇಲಾಖೆ ವಿರುದ್ಧ 50 ಪರ್ಸೆಂಟ್ ಲಂಚದ ಆರೋಪ ಕೇಳಿ ಬಂದಿದೆ.
ಖಾಸಗಿ ಶಾಲೆಗಳ ಒಕ್ಕೂಟ ಶಿಕ್ಷಣ ಇಲಾಖೆbವಿರುದ್ಧ ಗಂಭೀರ ಆರೋಪ ಮಾಡಿದೆ. ಡಿಡಿಪಿಐಗೆ 20 ಪರ್ಸೆಂಟ್, ಬಿಇಓಗೆ 20 ಪರ್ಸೆಂಟ್ ಕೊಡಬೇಕಾಗಿದೆ. ಡಿಡಿಪಿಐ ಹಾಗೂ ಬಿಇಓಗಳು ಯಾವುದೇ ಮುಲಾಜಿಲ್ಲದೆ ನೇರವಾಗಿ ಲಂಚ ಕೇಳಿದ್ದಾರೆ. ಮಾನ್ಯತೆ ನವೀಕರಣಕ್ಕೆ ಲಕ್ಷ ಲಕ್ಷ ರೂಪಾಯಿ ಲಂಚ ಕೊಡಬೇಕು ಅಂತಾ ರುಪ್ಸಾ ಆರೋಪ ಮಾಡಿದೆ.
ರುಪ್ಸಾ ಅಧ್ಯಕ್ಷರು ಸುಖಾಸುಮ್ಮನೆ ಆರೋಪ ಮಾಡಿಲ್ಲ. ಶಿಕ್ಷಣ ಇಲಾಖೆಯಲ್ಲಿ ಯಾವ ಮಟ್ಟದಲ್ಲಿ ಎಷ್ಟು ಪರ್ಸೆಂಟ್ ಕಮಿಷನ್ ದಂಧೆ ನಡೆಯುತ್ತಿದೆ ಅನ್ನೋದಕ್ಕೆ ದಾಖಲೆಯನ್ನೂ ರಿಲೀಸ್ ಮಾಡಿದೆ. ಆರ್‌ಟಿಇ ಹಣ ಬಿಡುಗಡೆಗಾಗಿ ವಿಜಯಪುರ ಬಿಇಓ ಮರ್ಯಾದೆ ಬಿಟ್ಟು, ತಮ್ಮ ಕರ್ತವ್ಯವನ್ನೇ ಮರೆತು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮೊದಲು ಕುಶಲೋಪರಿ ಮುಗಿದು ಮುಖ್ಯ ಮಾತುಕತೆ ಶುರುವಾಗುತ್ತೆ. ಆ ಮಾತಲ್ಲಿ ಹೆಡ್ ಮಾಸ್ಟರ್ ಹತ್ತಿರ ಕೊಟ್ಟು ಕಳಿಸ್ತೀನಿ ಅಂತಾ ವ್ಯಕ್ತಿ ಹೇಳ್ತಾನೆ. ಖಾಸಗಿ ಶಾಲೆಗಳ ಒಕ್ಕೂಟದ ಆರೋಪದ ಪ್ರಕಾರ ಇದು ಒಂದು ಕಡೆ ಮಾತ್ರ ನಡೆಯುತ್ತಿಲ್ಲ. ಶಿಕ್ಷಣ ಇಲಾಖೆಯ ಅಡಿಯಿಂದ ಮುಡಿವರೆಗೂ ಹಲವು ರೇಂಜ್‌ಗಳಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದ್ಯಂತೆ. ಇಷ್ಟಕ್ಕೆ ಸುಮ್ಮನಾಗದ ರುಪ್ಸಾ ಶಿಕ್ಷಣ ಸಚಿವ ಬಿಸಿ ನಾಗೇಶ್ ವಿರುದ್ಧವೇ ನೇರ ಆರೋಪ ಮಾಡಿದೆ. ಶಿಕ್ಷಣ ಸಚಿವರನ್ನೇ ವಜಾಗೊಳಿಸುವಂತೆ ಪ್ರಧಾನಿ ಮೋದಿಯವ್ರಿಗೆ ಪತ್ರ ಬರೆದಿದ್ದಾರೆ. ವಜಾಗೊಳಿಸದಿದ್ದರೆ ಹೋರಾಟದ ಹಾದಿ ತುಳಿಯುತ್ತೇವೆ ಅಂತಾ ವಾರ್ನಿಂಗ್ ಮಾಡಿದ್ದಾರೆ.
ಮಾನ್ಯತೆ ನವೀಕರಣಕ್ಕೆ ಲಕ್ಷಾಂತರ ಹಣ ಅಧಿಕಾರಿಗಳಿಗೆ ಕೊಡಬೇಕು. ಲಂಚ ಪಡೆಯುವ ಸಲುವಾಗಿಯೇ ಶಾಲೆಗಳಲ್ಲಿ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಲಾಗಿದೆ. ಇನ್ನು ಆರ್.ಟಿ.ಇ ಶುಲ್ಕ ಮರುಪಾವತಿ ಮಾಡಲು 30 ರಿಂದ 40 ಶೇಕಡಾದಷ್ಟು ಲಂಚ ವಸೂಲಿ ಮಾಡಲಾಗ್ತಿದೆ. ಜೊತೆಗೆ ಅನ್ಯ ಪಠ್ಯಕ್ರಮ ಅನುಸರಿಸಲು ಎನ್ಒಸಿ ಗಾಗಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೀತಿದೆ. ದಾಖಲೆ ನೆಪದಲ್ಲಿ ಅಧಿಕಾರಿಗಳಿಂದ ತಿಂಗಳಿಗೊಮ್ಮೆ ಮಾಮೂಲಿ ವಸೂಲಿ ಮಾಡಲಾಗ್ತಿದೆ.
ಹಣ ಮಾಡಲು ವರ್ಷಕ್ಕೊಮ್ಮೆ ಇಲಾಖೆಯಿಂದ ವರ್ಗಾವಣೆಯ ದಂಧೆಯೂ ಚಾಲ್ತಿಯಲ್ಲಿದೆ. ಅಲ್ಲದೆ ರಾಜ್ಯದ ಸರ್ಕಾರಿ ಶಾಲೆಗಳನ್ನೇ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮರೆತಿದ್ದಾರೆ ಅಂತಾ ರುಪ್ಸಾ ಆರೋಪಿಸಿದೆ.
ಹೀಗೆ ಹಲವು ಇಲಾಖೆಗಳ ಬಗ್ಗೆ ಕೇಳಿ ಬರ್ತಿದ್ದ ಲಂಚ, ಕಮಿಷನ್ ಆರೋಪಕ್ಕೆ ಶಿಕ್ಷಣ ಇಲಾಖೆಯೂ ಹೊರತಾಗಿಲ್ಲ. ಖಾಸಗಿ ಶಾಲೆಗಳ ಒಕ್ಕೂಟವೇ ಖುದ್ದು ಅಖಾಡಕ್ಕಿಳಿದು ಶಿಕ್ಷಣ ಇಲಾಖೆಯ ಟಾಪ್ ಟು ಬಾಟಮ್ ಅಧಿಕಾರಿಗಳ ಧನ ದಾಹದ ಕರ್ಮಕಾಂಡವನ್ನೇ ಬಿಚ್ಚಿಟ್ಟಿದೆ. ನೇರವಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿರುದ್ಧವೇ ತೊಡೆ ತಟ್ಟಿದೆ. ಶಿಕ್ಷಣ ಇಲಾಖೆಯ ಲಂಚಾವತಾರದ ಕಥೆಯು ಪ್ರಧಾನಿ ಮೋದಿಯವರ ಟೇಬಲ್ ವರೆಗೂ ತಲುಪಿದೆ.


























