ಬಂಟ್ವಾಳ: ಸೋಣ ಅಮವಾಸ್ಯೆಯ ದಿನದಿಂದ ಬಾದ್ರಪದ ಶುಕ್ಲ ಚೌತಿ ಹಬ್ಬದ ದಿನದವರೆಗೆ ನಡೆಯುವ ‘ಸುಳ್ಳಮಲೆ ತೀರ್ಥ ಸ್ನಾನ’ಕ್ಕೆ ಪೂರ್ವಭಾವಿಯಾಗಿ ಬಿದಿರಿನ ಕೇರ್ಪು ( ಏಣಿ) ಇಡುವ ಕಾರ್ಯಕ್ರಮ ಆ.27 ರಂದು ನಡೆಯಿತು.

ಅನಾಧಿಕಾಲದಿಂದ ನಡೆದು ಬಂದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.
ತುಳುನಾಡಿನಲ್ಲಿ ಅತ್ಯಂತ ಅಪರೂಪದ ವಿಶಿಷ್ಟ ತೀರ್ಥ ಕ್ಷೇತ್ರ ಎನಿಸಿದ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಸುಳ್ಳಮಲೆ ಗುಹಾ ತೀರ್ಥಕ್ಕೆ ಪ್ರಾರ್ಥನೆ ಸಲ್ಲಿಸಿ,ಕೇರ್ಪು ಇಟ್ಟು ಧಾರ್ಮಿಕ ವಿಧಿ-ವಿಧಾನವನ್ನು ನೆರವೇರಿಸಿ ಅರಸು ಗುಡ್ಡೆಚಾಮುಂಡಿ ಮತ್ತು ಪ್ರಧಾನಿ ಪಂಜುರ್ಲಿ ದೈವಗಳಿಗೆ ತಂಬಿಲ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಾಣಿಗುತ್ತು ಸಚಿನ್ ರೈ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ ಮತ್ತು ಗ್ರಾಮಸ್ಥರು ಸೇರಿದಂತೆ ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು.

ಆ.27 ಶನಿವಾರದಿಂದ ಆ.31 ಬುಧವಾರ ಬಾದ್ರಪದ ಚೌತಿವರೆಗೆ ಗುಹಾ ತೀರ್ಥ ಸ್ನಾನಕ್ಕೆ ಭಕ್ತಾಧಿಗಳಿಗೆ ಮುಕ್ತ ಅವಕಾಶವಿರಲಿದೆ.



























