ವಿಟ್ಲ: ದಿವ್ಯಜ್ಯೋತಿ ಮಿತ್ರವೃಂದದ ವತಿಯಿಂದ 2022ರ ಶ್ರೀಕೃಷ್ಣ ಜನ್ಮಾಷ್ಟಮಿಯ ಆಟೋಟ ಸ್ಪರ್ಧೆಗಳು ಆ.28 ರಂದು ಎರುಂಬು ಶ್ರೀ ವಿಷ್ಣುಮಂಗಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ವಿಜೃಂಭಣೆಯಿಂದ ಜರುಗಿತು.

ಪುಟಾಣಿಗಳು, ಬಾಲಕ, ಬಾಲಕಿಯರು ಪುರುಷರು, ಮಹಿಳೆಯರೆಂಬ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ಬೇಧ – ಭಾವ ಮರೆತು ಸಾಮರಸ್ಯ,ಸೌಹಾರ್ದತೆಯಿಂದ ಜರುಗಿತು.

ವಿಷ್ಣುಮಂಗಲ ದೇವರಿಗೆ ಭಜನೆ ಹಾಗೂ ವಿಶೇಷ ಪೂಜೆ ಸಲ್ಲಿಸಿ, ಗೋಪಾಲ ಬೆಲ್ಚಪ್ಪಾಡ ಆಚಾರ ಪಟ್ಟವರು ಶ್ರೀ ಭಗವತಿ ಕ್ಷೇತ್ರ, ಶ್ರೀಕಲಾ ಬಾಲಕೃಷ್ಣ ಕಾರಂತ, ಸದಾನಂದ ಶೆಟ್ಟಿ ಎರುಂಬು, ಇವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಸ್ಪರ್ಧೆಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಇದು ಸ್ನೇಹ ಕೂಟ, ಶ್ರೀಕೃಷ್ಣನ ಜನ್ಮ ಹಾಗೂ ಅನುಗ್ರಹ ಪೂರಿತ ಬದುಕು ಕಲಿಯುಗದ ಜನರ ಸಂಘ ಶಕ್ತಿಗೆ ಮಾದರಿಯಾಗಿದೆ. ಭಿನ್ನತೆಯೇ ಆವರಿಸಿರುವ ಸಮಾಜಕ್ಕೆ ಸಾಮರಸ್ಯದ ಬದುಕಿನ ಅವಶ್ಯಕತೆ ಇದೆ. ಇದಕ್ಕೆ ಈ ಕಾರ್ಯಕ್ರಮ ಕೊಡುಗೆ ಕೊಡಲಿ ಎಂದು ಅತಿಥಿಗಳು ಆಯೋಜಕರ ಸಂಯೋಜನೆಯನ್ನು ಶ್ಲಾಘಿಸಿದರು.

ಸಂಘದ ಹಿರಿಯ ಕಾರ್ಯಕರ್ತರಾದ ಸಿ. ಯಚ್. ಸಂಜೀವ ಶೆಟ್ಟಿ, ಜೊತೆಗಿದ್ದು ಪ್ರೋತ್ಸಾಹಿಸಿದರು. ದಿವ್ಯಜ್ಯೋತಿ ಮಿತ್ರ ವೃಂದದ ಸಕ್ರಿಯ ಸದಸ್ಯ ದಿವ್ಯಧನುಷ್ ರೈ,ಹಿರಿಯ ಸಂಘಟಕ ವಸಂತ ಟೈಲರ್, ದಿವ್ಯಜ್ಯೋತಿ ಮಿತ್ರವೃಂದದ ಅಧ್ಯಕ್ಷ ಜಯಪ್ರಕಾಶ್, ಕ್ರೀಡಾ ಕಾರ್ಯದರ್ಶಿ ಕೇಶವ ಕುಲಾಲ್, ನವೀನ್ ಕ್ರಮವಾಗಿ ನಿರೂಪಣೆ, ಸ್ವಾಗತ, ಧನ್ಯವಾದ ನೆರವೇರಿಸಿದರು.
ಬೆಳಗ್ಗಿನಿಂದ ಸಂಜೆಯವರೆಗೂ ಊರ, ಪರವೂರ ಕ್ರೀಡಾಸಕ್ತರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ವಿಷ್ಣುಮಂಗಲ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಕಾರಂತ, ಪಂಚಾಯತ್ ಸದಸ್ಯೆ ಗಿರಿಜಾ ಬಿಟ್ಟಿಮೂಲೆ ಹಿರಿಯ ಕಾರ್ಯಕರ್ತರಾದ ಸಿ. ಯಚ್. ಸಂಜೀವ ಶೆಟ್ಟಿ, ಸದಾನಂದ ಶೆಟ್ಟಿ ಎರುಂಬು, ದಿವ್ಯಜ್ಯೋತಿ ಮಿತ್ರವೃಂದದ ಅಧ್ಯಕ್ಷ ಜಯಪ್ರಕಾಶ್, ಕ್ರೀಡಾ ಕಾರ್ಯದರ್ಶಿ ಕೇಶವ ಕುಲಾಲ್, ಸುಜ್ಞಾನ ಮಹಿಳಾ ಮಂಡಲದ ಅಧ್ಯಕ್ಷೆ ಶಾಲಿನಿ, ಭಾಗವಹಿಸಿ ಬಹುಮಾನ ವಿತರಿಸಲಾಯಿತು.

ತೀರ್ಪುಗಾರರಾಗಿ ಸಹಕರಿಸಿದ ದೈಹಿಕ ಶಿಕ್ಷಕರಾದ ಸುರೇಶ್ ವೈ. ಯಸ್, ನೀರಜ ಜನಾರ್ಧನ್, ಹಾಗೂ ಕೆ. ವಿ ಬಂಗೇರ ಮತ್ತು ಸವಿತ ಎರುಂಬು ರವರನ್ನು ಗೌರವಿಸಲಾಯಿತು. ಆಟೋಟ ಸ್ಪರ್ಧೆಗಳ ಸವಿಯನ್ನು ಸರ್ವರೂ ಸಂಭ್ರಮಿಸಿದ ಕಾರ್ಯಕ್ರಮದ ನಿರೂಪಣೆಯಲ್ಲಿ ರಾಧಾಕೃಷ್ಣ ಎರುಂಬು ರವರು ಸಹಕರಿಸಿದರು.



























