ನವದೆಹಲಿ: ಭಾರತದ ಸುಪ್ರೀಂ ಕೋರ್ಟ್ ಇಂದು (ಆಗಸ್ಟ್ 29) ಕರ್ನಾಟಕದ ಹಿಜಾಬ್ ನಿಷೇಧದ ಪ್ರಕರಣದ ವಿಚಾರಣೆ ನಡೆಸಲಿದೆ.
ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸದಂತೆ ಸರ್ಕಾರ ಆದೇಶ ನೀಡಿದ್ದಕ್ಕೆ ರಾಜ್ಯಾದ್ಯಂತ ಭಾರೀ ಗಲಾಟೆ, ಪ್ರತಿಭಟನೆಗಳು ನಡೆದಿದ್ದವು. ಹಲವು ವಿದ್ಯಾರ್ಥಿನಿಯರು ಪರೀಕ್ಷೆಯನ್ನೂ ಬಹಿಷ್ಕರಿಸಿದ್ದರು. ಈ ಪ್ರಕರಣದ ಕುರಿತು ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಲ್ಲಿ ಯೂನಿಫಾರ್ಮ್ ಮಾತ್ರ ಧರಿಸಬೇಕು, ಯಾವುದೇ ಧರ್ಮ ಸೂಚಕ ಉಡುಪನ್ನು ಧರಿಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಬಗ್ಗೆ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠವು ಇಂದು ಹಿಜಾಬ್ ನಿಷೇಧದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ.


























