ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಂತೆಯೇ ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೂ ತೀರ್ಪು ನೀಡಿ ಎಂದು ಅರ್ಜಿದಾರರು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ರಾತ್ರಿ 10 ಗಂಟೆಗೆ ನ್ಯಾ.ಅಶೋಕ್.ಎಸ್ ಕಿಣಗಿಯವರ ಕಚೇರಿಯಲ್ಲಿ ವಿಚಾರಣೆ ನಡೆದಿದೆ. ವಾದ ವಿವಾದ ಆಲಿಸಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಸಮ್ಮತಿ ನೀಡಿದೆ.
ಅಂಜುಮಾನ್ ಇಸ್ಲಾಂ ಮನವಿ ತಿರಸ್ಕರಿಸಿ ನಾಳಿನ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಎರಡೂ ಪ್ರಕರಣಗಳೂ ಪ್ರತ್ಯೇಕ
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದ್ದು ಅರ್ಜಿದಾರರ ಪರ ವಕೀಲರು ಸುಪ್ರೀಂಕೋರ್ಟ್ ಆದೇಶ ಉಲ್ಲೇಖಿಸಿದ್ದಾರೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿಗೆ ಆದೇಶಿಸಿದೆ. ಇದೇ ಆದೇಶವನ್ನು ಹುಬ್ಬಳ್ಳಿ ಈದ್ಗಾ ಕೇಸ್ಗೂ ಅನ್ವಯಿಸಲು ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಪರ ವಕೀಲ ಎಎಜಿ ಧ್ಯಾನ್ ಚಿನ್ನಪ್ಪ ಈ ಸಂಬಂಧ ಆಕ್ಷೇಪ ಸಲ್ಲಿಸಿದ್ದು ಚಾಮರಾಜಪೇಟೆ ಮೈದಾನಕ್ಕೆ ಸಂಬಂಧಿಸಿದಂತೆ ಮಾಲೀಕತ್ವ ವಿವಾದವಿದೆ. ಆದರೆ ಹುಬ್ಬಳ್ಳಿ ಈದ್ಗಾ ಮೈದಾನದ ಮಾಲೀಕತ್ವದ ವಿವಾದವಿಲ್ಲ. ಹೀಗಾಗಿ ಎರಡೂ ಪ್ರಕರಣಗಳೂ ಪ್ರತ್ಯೇಕವಾಗಿವೆ ಎಂದರು.
ಈ ಹಿಂದೆಯೇ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ. ಅಂಜುಮಾನ್ ಇಸ್ಲಾಂ ವಿರುದ್ಧ ಆದೇಶ ನೀಡಿದೆ. ಯಾವುದೇ ಕಟ್ಟಡ ಕಟ್ಟದಂತೆ ನಿರ್ಬಂಧ ವಿಧಿಸಿದೆ. ಜಾತ್ರೆ ಮತ್ತು ಇನ್ನಿತರೆ ಉದ್ದೇಶಗಳಿಗೆ ಬಳಸಬಹುದೆಂದು ಹೇಳಿದೆ. ಅಂಜುಮಾನ್ ಇಸ್ಲಾಂ ಸಲ್ಲಿಸಿದ್ದ ಮೇಲ್ಮನವಿಯೂ ವಜಾಗೊಂಡಿದೆ. ಮೈದಾನವನ್ನು ಅಂಜುಮಾನ್ ಇಸ್ಲಾಂಗೆ ಲೀಸ್ಗೆ ನೀಡಿಲ್ಲ. ನಮಾಜ್ ಮಾಡಲು ಮಾತ್ರ ಲೈಸೆನ್ಸ್ ನೀಡಲಾಗಿತ್ತು ಎಂದು ರಾಜ್ಯ ಸರ್ಕಾರದ ಪರ ಎಎಜಿ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದ್ರು. ವರ್ಷದಲ್ಲಿ 2 ಬಾರಿ ಮಾತ್ರ ನಮಾಜ್ ಮಾಡಲು ಲೈಸೆನ್ಸ್ ನೀಡಲಾಗಿದೆ. ಇದನ್ನು ಹೊರತುಪಡಿಸಿ ಅಂಜುಮಾನ್ ಸಂಸ್ಥೆಗೆ ಯಾವುದೇ ಹಕ್ಕಿಲ್ಲ. ಅಂಜುಮಾನ್ ಇಸ್ಲಾಂ ಬಳಿ ಭೂಮಿ ಎಂದಿಗೂ ಸ್ವಾಧೀನ ಇರಲಿಲ್ಲ. ಹೀಗಾಗಿ ಭೂಮಿಯನ್ನು ನಮಗೆ ಬೇಕಾದಂತೆ ಬಳಕೆ ಮಾಡಬಹುದು. ಇದಕ್ಕೆ ಹು-ಧಾ ನಗರಪಾಲಿಕೆಗೆ ಎಲ್ಲಾ ಅಧಿಕಾರವಿದೆ ಎಂದರು.
ಅಂಜುಮಾನ್ ಸಲ್ಲಿಸಿದ್ದ ಅರ್ಜಿ ಊರ್ಜಿತವಲ್ಲ
ವರ್ಷಕ್ಕೆ ಎರಡು ಬಾರಿ ನಮಾಜ್ ವೇಳೆ ಅಡ್ಡಿಪಡಿಸಿಲ್ಲ. ಆಗ ಅಡ್ಡಿಪಡಿಸಿದ್ದರೆ ಆಗ ಅಂಜುಮಾನ್ ಅರ್ಜಿ ಸಲ್ಲಿಸಬಹುದಿತ್ತು. ಹೀಗಾಗಿ ಅಂಜುಮಾನ್ ಸಲ್ಲಿಸಿದ್ದ ಅರ್ಜಿ ಊರ್ಜಿತವಲ್ಲ. ಸುಪ್ರೀಂಕೋರ್ಟ್ ಆದೇಶಕ್ಕೂ ಹುಬ್ಬಳ್ಳಿ ಮೈದಾನಕ್ಕೂ ಸಂಬಂಧವಿಲ್ಲ. ಸ್ವಾಧೀನ ಸಂಬಂಧಿಸಿದಂತೆ ವಿವಾದವಿದ್ದಿದ್ದರಿಂದ ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ ಹುಬ್ಬಳಿ ಮೈದಾನದ ಸಂಬಂಧ ಅವರ ಬಳಿ ಇಲ್ಲ. ಗಣೇಶೋತ್ಸವಕ್ಕೂ ಷರತ್ತುಗಳನ್ನು ವಿಧಿಸಲಾಗಿದೆ. ಶಾಶ್ವತ ಕಟ್ಟಡ ಕಟ್ಟುವಂತಿಲ್ಲವೆಂದು ಷರತ್ತಿದೆ. ಕೇವಲ 30X30 ವಿಸ್ತೀರ್ಣದಲ್ಲಿ ಮಾತ್ರ ಪೆಂಡಾಲ್ ಹಾಕಲಾಗುತ್ತಿದೆ. ಹೀಗಾಗಿ ಕೇವಲ 30 ಬೈ 30 ರಲ್ಲಿ ಮಾತ್ರ ಪೆಂಡಾಲ್ ಹಾಕಲಾಗುತ್ತಿದೆ. ಗಣೇಶ ಉತ್ಸವ ಒಂದು ಧರ್ಮದ್ದಲ್ಲ ಎಲ್ಲರೂ ಭಾಗವಹಿಸಬಹುದು ಎಂದು ಎಎಜಿ ಧ್ಯಾನ್ ಚಿನ್ನಪ್ಪ ವಾದಿಸಿದ್ದಾರೆ.

























